Site icon Vistara News

Wayanad Landslide: ಕುರ್ಚಿಯಲ್ಲಿ ಕುಳಿತ.. ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆ; ಇದು ಸ್ಮಶಾನ ಸದೃಶ್ಯ ವಯನಾಡಿನ ಭೀಕರ ದೃಶ್ಯ

Wayanad Landslide

ವಯನಾಡ್‌: ದೇವರನಾಡು ಕೇರಳ(Kerala)ದ ವಯನಾಡ್‌(Wayanad Landslide) ಅಕ್ಷರಶಃ ಸ್ಮಶಾನವಾಗಿ ಬದಲಾಗಿದೆ. ಎಲ್ಲೆಂದರಲ್ಲಿ ಮಣ್ಣು, ನೀರು, ಬೃಹತ್ ಬಂಡೆಗಳು, ಬುಡಮೇಲಾದ ಮರಗಳು, ಕಟ್ಟಡಗಳ ಅವಶೇಷಗಳೇ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುತ್ತಿವೆ. ಈ ನಡುವೆ ಅವಶೇಷದಡಿಯಲ್ಲಿ ಸಿಲುಕಿದ ಜೀವಗಳು ಮತ್ತು ಮೃತದೇಹಗಳ ಪತ್ತೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ(Rescue Operation) ನಡೆಯುತ್ತಿದೆ.ರಕ್ಷಣಾ ಕಾರ್ಯಾಚರಣೆ ವೇಳೆ ಸಿಕ್ಕಿರುವ ಮೃತದೇಹಗಳು ಎಂಥವರ ಕಣ್ಣಲ್ಲೂ ಕಣ್ಣೀರು ಬರಿಸುವಂತಿದೆ.

ರಕ್ಷಣಾ ಕಾರ್ಯಕರ್ತರು ನೆಲದಡಿಯಲ್ಲಿರುವ ಮನೆಗಳನ್ನು ನೆಲಸಮಗೊಳಿಸಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರತಿ ಮನೆಯಲ್ಲೂ ಹೃದಯ ವಿದ್ರಾವಕ ದೃಶ್ಯಗಳು ಕಂಡುಬರುತ್ತಿವೆ ಎಂದು ರಕ್ಷಣಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ ವ್ಯಕ್ತಿಯೊಬ್ಬ ಹೇಳಿದ್ದಾರೆ. ಮುಂಡಕ್ಕೈ ಎಂಬಲ್ಲಿನ ಮನೆಯೊಂದರಲ್ಲಿ ಕುರ್ಚಿಗಳ ಮೇಲೆ ಕುಳಿತಿದ್ದ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಇನ್ನು ಚೂರಲ್ಮಲಾದಲ್ಲಿ ಕುಸಿದು ಬಿದ್ದಿದ್ದ ಮನೆಯ ಅವಶೇಷದಡಿಯಿಂದ ಪುಟ್ಟ ಕಂದಮ್ಮನ ಶವವನ್ನು ಹೊರತೆಗೆಯಲಾಗಿದೆ.

ಮತ್ತೊಂದು ಮನೆಯಲ್ಲಿ ಮಕ್ಕಳು ಸೇರಿದಂತೆ ಐದಾರು ಜನ ಒಟ್ಟಿಗೆ ಅಪ್ಪಿಕೊಂಡ ಸ್ಥಿತಿಯಲ್ಲಿ ಮೃತದೇಹಗಳನ್ನು ಪತ್ತೆಯಾಗಿದ್ದು, ಆ ದೃಶ್ಯವನ್ನು ಅವರ ಇಡೀ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಜನರು ಜೀವಂತವಾಗಿದ್ದಾರೆ ಎಂದು ನಂಬಲಾಗಿದೆ. ಅವರನ್ನು ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಕಟ್ಟಡದ ಅವಶೇಷಗಳ ನಡುವೆ ಶೋಧ ನಡೆಸಲಾಗುತ್ತಿದೆ. ಮೃತರ ಸಂಖ್ಯೆ ಕ್ಷಣ ಕ್ಷಣಕ್ಕೆ ಏರಿಕೆಯಾಗುತ್ತಿದೆ.

ಮಳೆ ಮತ್ತು ಪ್ರವಾಹದ ಶಕ್ತಿ ಕಡಿಮೆಯಾಗಿದ್ದು, ರಕ್ಷಣಾ ಕಾರ್ಯಕರ್ತರಿಗೆ ನೆಮ್ಮದಿ ನೀಡಿದೆ. ಆದರೆ, ಈ ಪ್ರದೇಶದಲ್ಲಿ ಕೆಸರು, ಜವುಗು ತುಂಬಿರುವುದರಿಂದ ಎಲ್ಲಿಯೂ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆಯಾಗಿದೆ. ದೊಡ್ಡ ಬಂಡೆಗಳನ್ನು ಸ್ಥಳಾಂತರಿಸಲು ಹೆಚ್ಚಿನ ಯಂತ್ರೋಪಕರಣಗಳು ಸಿಗುವುದಿಲ್ಲ ಎಂಬುದು ಸಮಸ್ಯೆಯಾಗಿದೆ.

ಸುಮಾರು 400 ಮನೆಗಳನ್ನು ಹೊಂದಿದ್ದ ಮುಂಡಕ್ಕೈನಲ್ಲಿ ಈಗ ಕೇವಲ ಮೂವತ್ತು ಮನೆಗಳು ಉಳಿದಿವೆ. ಎಷ್ಟು ಮಂದಿ ಜೀವಂತವಾಗಿದ್ದಾರೆ ಅಥವಾ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇಲ್ಲ. ಕೆಲವರು ತಮ್ಮ ಕಾಣೆಯಾದ ಪ್ರೀತಿಪಾತ್ರರನ್ನು ಹುಡುಕಲು ಆಸ್ಪತ್ರೆಗಳನ್ನು, ದುರಂತದ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾರೆ.

ಹಲವರು ಇಲ್ಲಿಯವರೆಗೆ ದುಡಿದಿದ್ದನ್ನೆಲ್ಲ ಕಳೆದುಕೊಂಡು ಪ್ರಸ್ತುತ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಅದರೊಂದಿಗೆ ಅವರು ತಮ್ಮ ಕುಟುಂಬ ಮತ್ತು ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಬದಲಾಯಿಸಲು ಅವರ ಬಳಿ ಬಟ್ಟೆಯೂ ಇಲ್ಲ. ಅವರ ಮುಂದಿನ ಜೀವನ ಹೇಗೆ ಎಂಬುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನು ರಕ್ಷಣಾ ಸ್ಥಳಗಳ ಒಂದೊಂದು ದೃಶ್ಯ ಮನ ಕಲುಕುವಂತಿದೆ.

ಇದನ್ನೂ ಓದಿ: Wayanad Landslide: “ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ”- ತೇಜಸ್ವಿ ಸೂರ್ಯ ಕಿಡಿ

Exit mobile version