ತಿರುವನಂತಪುರಂ: ರಾಜ್ಯದಲ್ಲಿ ಸಂಭವಿಸಿದ ಅತೀ ಭೀಕರ ಭೂಕುಸಿತಕ್ಕೆ ಕೇರಳ ತತ್ತರಿಸಿದ ಹೋಗಿದೆ. ವಯನಾಡಿನಲ್ಲಿ ಮಣ್ಣು ಜರಿದು ಇಡೀ ಊರುಗಳನ್ನೇ ನಾಮಾವಶೇಷ ಮಾಡಿದ್ದು, ಮೃತಪಟ್ಟವರ ಸಂಖ್ಯೆ 270 ದಾಟಿದೆ (Wayanad Landslide). 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಅವಶೇಷಗಳಡಿ ಹುಡುಕಾಟ ಮುಂದುವರಿದಿದೆ. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ. ಅದರಲ್ಲಿಯೂ ಕುಟುಂಬಸ್ಥರನ್ನೆಲ್ಲ ಕಳೆದುಕೊಂಡ ಜಿಷ್ಣು ಎನ್ನುವ 26 ವರ್ಷದ ಯುವಕನ ಸ್ಥಿತಿ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಮನೆಯ ಜತೆಗೆ ಪಾಲಕರು, ಒಟಹುಟ್ಟಿದವರು, ಅಜ್ಜಿಯನ್ನು ಪ್ರವಾಹ ಕೊಚ್ಚಿಕೊಂಡು ಹೋಗಿದ್ದು, ಸದ್ಯ ಸಹೋದರ ಮಾತ್ರ ಉಳಿದಿದ್ದಾನೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಜಿಷ್ಣು ಸದ್ಯ ಊರಿಗೆ ಮರಳಿದ್ದಾರೆ. ಅವರ ಮನೆ ಇದ್ದ ಜಾಗದಲ್ಲಿ ಈಗ ಉಳಿದಿರುವುದು ಸ್ಮಶಾನ ಮೌನ ಮತ್ತು ಕೆಸರು ಮಾತ್ರ. ಹೌದು, ಮನೆಯ ಜತೆಗೇ ಮನೆಯವರನ್ನೂ ಭೀಕರ ಪ್ರವಾಹ ಹೊತ್ತುಕೊಂಡು ಹೋಗಿದೆ. ಜಿಷ್ಣು ಅವರ ಮನೆಯವರು ಆಶ್ರಯ ಪಡೆದಿದ್ದ ಸಂಬಂಧಿಕರ ಮನೆಯೂ ಕೊಚ್ಚಿಕೊಂಡು ಹೋಗಿದೆ. ಈ ಸತ್ಯವನ್ನು ಜಿಷ್ಣುಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಸದ್ಯ ಅವರ ಪಾಲಿಗೆ ಕಿರಿಯ ಸಹೋದರ ಮಾತ್ರ ಉಳಿದಿದ್ದಾನೆ.
From Wayanad the Western Ghat have been completely destroyed,common people have with various agencies talking rescue action at Wayanad landslide disaster.🥲🥲
— Suman Meena (@SumanNaresh4) August 1, 2024
Please save peoples🙏🙏#WayanadLandslide#WayanadDisaster #KeralaRains pic.twitter.com/gflHy9Nvi0
ಕಣ್ಣೀರ ಕಥೆ
ಅತೀ ಹೆಚ್ಚು ದುರಂತ ಬಾಧಿತ ಮುಂಡಕೈ ನಿವಾಸಿ ಜಿಷ್ಣು ರಂಜನ್ ಸೌದಿ ಅರೇಬಿಯಾದ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ಮುಂಡಕೈಯ ಪುಂಜಿರಿವಟ್ಟಂನಲ್ಲಿರುವ ಅವರ ಮನೆಯಲ್ಲಿ ತಂದೆ ರಾಜನ್, ತಾಯಿ ಮರುತೈ, ಒಡಹುಟ್ಟಿದವರಾದ ಜಿನು (27), ಜಿಬಿನ್ (18), ಆ್ಯಂಡ್ರಿಯಾ (16), ಜಿನು ಅವರ ಪತ್ನಿ ಪ್ರಿಯಾಂಕಾ (25) ಮತ್ತು ಅಜ್ಜಿ ನಾಗಮ್ಮ ವಾಸವಾಗಿದ್ದರು. ಇದೀಗ ಅವರೆಲ್ಲ ಮೃತಪಟ್ಟಿದ್ದಾರೆ. ಶಿಜು (25) ಒಬ್ಬನೇ ದುರಂತದಿಂದ ಪಾರಾಗಿದ್ದಾನೆ. ಮುಂಡಕೈ ಭಾಗದಲ್ಲಿ ಜುಲೈ 28ರಂದು ಸಣ್ಣ ಮಟ್ಟಿನ ಭೂಕುಸಿತ ಉಂಟಾಗಿತ್ತು. ಇದನ್ನು ಅರಿತ ಸೌದಿ ಅರೇಬಿಯಾದಲ್ಲಿದ್ದ ಜಿಷ್ಣು ಗಾಬರಿಯಿಂದ ಮನೆಯವರಿಗೆ ಕರೆ ಮಾಡಿದ್ದರು. ಆದರೆ ಸಂಪರ್ಕ ಸಿಕ್ಕಿರಲಿಲ್ಲ.
ಇನ್ನಷ್ಟು ಗಾಬರಿಗೊಂಡ ಅವರು ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಲೇ ಇದ್ದರು. ಜುಲೈ 30ರ ಸಂಜೆ ತನಕವೂ ಮನೆಯವರ ಸಂಪರ್ಕ ಸಾಧ್ಯವಾಗಿರಲಿಲ್ಲ. ಆಗಲೇ ಅವರಿಗೆ ಮನೆ ಕುಸಿದು ಬಿದ್ದಿರುವ ಬಗ್ಗೆ ತಿಳಿದು ಬಂದಿತ್ತು. ಜತೆಗೆ ಮನೆಯವರು ಸಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು ಎನ್ನುವ ವಿಚಾರ ತಿಳಿದು ಸ್ವಲ್ಪ ಸಮಾಧಾನಪಟ್ಟುಕೊಂಡಿದ್ದರು. ಆದರೆ ಭೂಕುಸಿತದಿಂದ ಎರಡೂ ಮನೆಯವರು ಕೊಚ್ಚಿಕೊಂಡು ಹೋಗಿದ್ದರು.
ಇದ್ಯಾವುದರ ಅರಿವು ಇರದ ಜಿಷ್ಣು ನಿರಂತರವಾಗಿ ಮನೆಗೆ ಕರೆ ಮಾಡಲು ಯತ್ನಿಸುತ್ತಲೇ ಇದ್ದರು. ಕೊನೆಗೆ ಪರಿಚಯಸ್ಥರಿಗೆ ಕರೆ ಮಾಡಿದರು. ಆದರೆ ಅವರಿಂದಲೂ ನಿಖರ ಮಾಹಿತಿ ದೊರೆಯಲಿಲ್ಲ. ಜುಲೈ 30ರಂದು ಸಂಜೆ ವೇಳೆಗೆ ತಂದೆ ರಾಜನ್ ಅವರ ಮೃತದೇಹ ದೊರೆತಿರುವ ಸುದ್ದಿ ಜಿಷ್ಣುಗೆ ಬರಸಿಡಿಲಂತೆ ಅಪ್ಪಳಿಸಿತು. ಜತೆಗೆ ಜಿನು ಮತ್ತು ತಾಯಿಯ ಅವರ ಮೃತದೇಹವೂ ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ಲಭಿಸಿತು. ಕೊನೆಗೆ ಶಿಜು ಮಾತ್ರ ಬದುಕುಳಿದಿರುವ ವಿಚಾರ ತಿಳಿದ್ದಿದ್ದು ಕೂಡಲೇ ಊರಿಗೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಭೂಕುಸಿತದಿಂದ ಈ ಕುಟುಂಬ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿತ್ತು.