ತಿರುವನಂತಪುರಂ: ದೇವರ ನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವು 358 ಜನರನ್ನು ಬಲಿಪಡೆದಿದೆ. ಇನ್ನೂ 300 ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮ (LIC) ಸೇರಿ ಹಲವು ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದೆ. “ಮೃತರು ಹಾಗೂ ಗಾಯಾಳುಗಳು ವಿಮೆ ಮಾಡಿಸಿದ್ದರೆ, ಅವರ ಕ್ಲೇಮ್‌ಅನ್ನು ಶೀಘ್ರದಲ್ಲೇ ನೀಡುವ ಮೂಲಕ ನೆರವಾಗಿ” ಎಂದು ಸೂಚಿಸಿದೆ.
ದೇಶದ ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಾದ ಎಲ್‌ಐಸಿ, ನ್ಯೂ ಇಂಡಿಯಾ ಇನ್ಶುರೆನ್ಸ್, ಓರಿಯಂಟಲ್ ಇನ್ಶುರೆನ್ಸ್ ಹಾಗೂ ಯುನೈಟೆಡ್ ಇಂಡಿಯಾ ಕಂಪನಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯವು ಸೂಚನೆ ನೀಡಿದೆ. ಸಂತ್ರಸ್ತ ಕುಟುಂಬಗಳಿಗೆ ಎಷ್ಟು ಸಾಧ್ಯವೋ ಅಷ್ಟು ನೆರವಾಗಿ ಎಂದು ಸೂಚಿಸಿದೆ. ಈಗಾಗಲೇ ವಿಮಾ ಕಂಪನಿಗಳು ಸ್ಥಳೀಯ ಪತ್ರಿಕೆಗಳು, ಸಾಮಾಜಿಕ ಜಾಲತಾಣ, ಕಂಪನಿ ವೆಬ್‌ಸೈಟ್ ಹಾಗೂ ಎಸ್‌ಎಂಎಸ್ ಮೂಲಕ ಪಾಲಿಸಿ ಹೋಲ್ಡರ್‌ಗಳನ್ನು ಸಂಪರ್ಕಿಸಲು ಯತ್ನಿಸುತ್ತಿವೆ ಎಂದು ಕೂಡ ಕೇಂದ್ರ ಸರ್ಕಾರ ತಿಳಿಸಿದೆ.
ವಯನಾಡು, ಪಾಲಕ್ಕಾಡ್, ಕಲ್ಲಿಕೋಟೆ, ಮಲಪ್ಪುರಂ ಹಾಗೂ ತ್ರಶ್ಶೂರ್‌ನಲ್ಲಿರುವ ಪಾಲಿಸಿದಾರರನ್ನು ಸಂಪರ್ಕಿಸುವ, ಅವರ ಸಂಪರ್ಕ ಸಂಖ್ಯೆಯನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುತ್ತದೆ. ಆ ಮೂಲಕ ವಿಮಾ ಸೌಲಭ್ಯದ ಮೂಲಕವಾದರೂ ಸಂತ್ರಸ್ತರಿಗೆ ನೆರವಾಗಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
In view of the unfortunate landslide incident and heavy rains in Kerala, the government has mandated the Public Sector Insurance companies (PSICs), including Life Insurance Corporation of India (LIC) @LICIndiaForever, National Insurance @NICLofficial, New India Assurance…
— Ministry of Finance (@FinMinIndia) August 3, 2024
ಕರ್ನಾಟಕದಲ್ಲೂ ಕಟ್ಟೆಚ್ಚರ
ವಯನಾಡು ದುರಂತವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಕರ್ನಾಟಕದ ಯಾವುದೇ ಮೂಲೆಯಲ್ಲಿ ಪ್ರವಾಹ, ಭೂಕುಸಿತ ಅಥವಾ ಇತರೇ ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರಲು ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿನ್ನೆ ಮುಖ್ಯಮಂತ್ರಿಗಳು ಕೊಡಗಿನಲ್ಲಿ ಭೂಕುಸಿತ ಸಂಭವಿಸಿದ ಜಾಗಕ್ಕೆ ಭೇಟಿ ನೀಡಿದ್ದರು.
“ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಮತ್ತೊಮ್ಮೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು” ಎಂದು ಭೇಟಿಯ ಬಳಿಕ ಹೇಳಿದ್ದರು. “ಜಿಲ್ಲೆಯಲ್ಲಿ 20 ಕಡೆ ಭೂ ಕುಸಿತ ಆಗಿದೆ, ಬಹುತೇಕ ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಜಾರಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಹಲವರು ಗಾಯಗೊಂಡಿದ್ದಾರೆ. 67 ಮನೆಗಳು ಪೂರ್ಣಹಾನಿ ಆಗಿವೆ. 176 ಮನೆಗಳು ಭಾಗಶಃ ಹಾನಿ ಆಗಿವೆ. 24 ಗಂಟೆಗಳ ಒಳಗೆ ಪೂರ್ಣ ಮತ್ತು ಭಾಗಶಃ ಹಾನಿ ಆಗಿರುವ ಘಟನೆಗಳೂ ನಡೆದಿವೆ. ಒಂದು ಲಕ್ಷದ 20 ಸಾವಿರ ರೂಪಾಯಿ ಜೊತೆಗೆ ಮನೆ ಕಟ್ಟಿ ಕೊಡಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದರಲ್ಲಿ 43 ಸಾವಿರ ರಾಜ್ಯ ಸರ್ಕಾರದ ಹಣ. ಈಗಾಗಲೇ ಸಂತ್ರಸ್ಥರ ಖಾತೆಗೆ ಹಣ ವರ್ಗಾವಣೆ ಆಗಿದೆ. 16 ಜಾನುವಾರು ಸತ್ತಿವೆ. ತಲಾ 35 ಸಾವಿರ ಪರಿಹಾರ ನೀಡಿದ್ದೇನೆ. 14 ಪರಿಹಾರ ಕ್ಯಾಂಪ್ ಗಳನ್ನು ತೆರೆಯಲಾಗಿದೆ. 10 ಕ್ಯಾಂಪ್ ಗಳಲ್ಲಿ 186 ಮಂದಿ ಇದ್ದಾರೆ. ತೋರಾ ಕ್ಯಾಂಪ್ ನಲ್ಲಿ ಇರುವವರ ಜೊತೆ ನಾನೇ ನೇರವಾಗಿ ಮಾತನಾಡಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!