Site icon Vistara News

Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

Rahul Gandhi

Wayanad or Rae Bareli? Rahul Gandhi says not guided by God like Narendra Modi

ತಿರುವನಂತಪುರಂ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಿದ ವಯನಾಡು ಹಾಗೂ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರೀಗ ಉಭಯ ಸಂಕಟಕ್ಕೆ ಸಿಲುಕಿದ್ದಾರೆ. ವಯನಾಡು ಸಂಸದನಾಗಿಯೇ ಮುಂದುವರಿಯಬೇಕೋ ಅಥವಾ ತಾಯಿ ಸೋನಿಯಾ ಗಾಂಧಿ ಕ್ಷೇತ್ರವಾಗಿದ್ದ ರಾಯ್‌ಬರೇಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಬೇಕೋ ಎಂಬ ಗೊಂದಲ ಕಾಡುತ್ತಿದೆ. ಇದರ ಬಗ್ಗೆಯೇ ಕೇರಳದಲ್ಲಿ ಮಾತನಾಡಿದ ಅವರು, “ನರೇಂದ್ರ ಮೋದಿ ಅವರಂತೆ ನಾನು ದೈವಾಂಶ ಸಂಭೂತನಲ್ಲ. ನನಗೆ ಜನರೇ ದೇವರು, ಅವರೇ ತೀರ್ಮಾನಿಸುತ್ತಾರೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

“ನನ್ನ ಮುಂದೆ ಎರಡು ಆಯ್ಕೆಗಳಿವೆ. ನಾನು ವಯನಾಡು ಸಂಸದನಾಗಿ ಮುಂದುವರಿಯಬೇಕೋ, ರಾಯ್‌ಬರೇಲಿ ಸಂಸದನಾಗಬೇಕೋ ಎಂಬ ಪ್ರಶ್ನೆ ಇದೆ. ಆದರೆ, ಪ್ರಧಾನಿಯವರಂತೆ ನನಗೆ ದೇವರು ಮಾರ್ಗದರ್ಶನ ನೀಡುವುದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದು, ದೇಶದ ಬಡವರೇ ನನಗೆ ದೇವರಾಗಿದ್ದಾರೆ. ನಾನು ಯಾವ ಕ್ಷೇತ್ರದ ಸಂಸದನಾಗಿ ಮುಂದುವರಿಯಬೇಕೋ ಎಂಬುದನ್ನು ದೇಶದ ಜನರೇ ತೀರ್ಮಾನಿಸುತ್ತಾರೆ” ಎಂಬುದಾಗಿ ಕೇರಳದ ಮಲಪ್ಪುರಂನಲ್ಲಿ ರಾಹುಲ್‌ ಗಾಂಧಿ ಹೇಳಿದರು.

“400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದರು. ಇದಾದ ಬಳಿಕ ಮಾಯವಾದ ಅವರು 300ಕ್ಕೂ ಅಧಿಕ ಕ್ಷೇತ್ರ ಅಂದರು. ಇದಾದ ನಂತರ, ನಾನೇನೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಎಲ್ಲ ತೀರ್ಮಾನಗಳೂ ದೇವರದ್ದೇ ಎಂದರು. ಆದರೆ, ನರೇಂದ್ರ ಮೋದಿ ಅವರಿಗೆ ಪರಮಾತ್ಮನೇ ಮುಂಬೈ ಏರ್‌ಪೋರ್ಟ್‌ ಬಿಟ್ಟುಕೊಡು, ಲಖನೌ ಏರ್‌ಪೋರ್ಟ್‌ ಬಿಟ್ಟುಕೊಡು, ಅಂಬಾನಿ ಹಾಗೂ ಅದಾನಿ ಅವರ ಪರವಾಗಿ ಕೆಲಸ ಮಾಡು ಎಂಬುದಾಗಿ ಸೂಚಿಸುತ್ತಿದ್ದಾನೆ” ಎಂದು ಕುಟುಕಿದರು.

ದೇವರ ಬಗ್ಗೆ ಮೋದಿ ಹೇಳಿದ್ದೇನು?

“ನನ್ನ ತಾಯಿ ಇರುವವರೆಗೆ ನನ್ನ ಭಾವನೆ ಬೇರೆಯೇ ಆಗಿತ್ತು. ಆದರೆ, ನನ್ನ ತಾಯಿ ಅಗಲಿದ ಮೇಲೆ ನನಗೆ ಹಲವು ವಿಚಿತ್ರ ಅನುಭವಗಳು ಆದವು. ನಾನು ಇಷ್ಟೊಂದು ಕೆಲಸ ಮಾಡಲಿ ಎಂಬುದಾಗಿ ದೇವರೇ ಕಳುಹಿಸಿದ್ದಾನೆ ಎಂದು ನನಗೆ ಅನಿಸುತ್ತದೆ. ಇದರಿಂದಾಗಿಯೇ ನಾನು ಹೆಚ್ಚು ಕೆಲಸ ಮಾಡಲು, ನಿಮ್ಮ ಸೇವೆ ಮಾಡಲು, ನಿಷ್ಕಲ್ಮಶವಾಗಿ ದುಡಿಯಲು ಸಾಧ್ಯವಾಗಿದೆ” ಎಂಬುದಾಗಿ ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿ ಅವರು ಹೇಳಿದ್ದರು.

ಇದನ್ನೂ ಓದಿ: Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

Exit mobile version