Site icon Vistara News

Tunnel Collapses: ಉತ್ತರಾಖಂಡದಲ್ಲಿ ಸುರಂಗ ಕುಸಿದು 30 ಗಂಟೆ; 40 ಜನರ ಸ್ಥಿತಿ ಈಗ ಹೇಗಿದೆ?

Tunnel Collapses

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ (Uttarkashi District) ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು (Tunnel Collapses) 30 ಗಂಟೆ ಕಳೆದಿದೆ. ಅದೃಷ್ಟವಶಾತ್‌, ಸುರಂಗದಲ್ಲಿರುವ 40 ಜನರ ಜತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಯು ಸಂಪರ್ಕ ಸಾಧಿಸಿದ್ದಾರೆ. ಹಾಗೆಯೇ, ಸುರಂಗದಲ್ಲಿ ಸಿಲುಕಿದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಒಳಗಿರುವ 40 ಕಾರ್ಮಿಕರ ಜತೆ ಸಂಪರ್ಕ ಸಾಧಿಸಲಾಗಿದೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಕಾರ್ಮಿಕರು ನಮಗೆ ಮಾಹಿತಿ ನೀಡಿದ್ದಾರೆ. ಕುಸಿದಿರುವ ಸುರಂಗದೊಳಗೆ ಅವಶೇಷಗಳನ್ನು ತೆಗೆಯುತ್ತ 15 ಮೀಟರ್‌ ಸಾಗಿದ್ದೇವೆ. ಇನ್ನೂ 35 ಮೀಟರ್‌ ಕೊರೆದು, ಒಳಗೆ ಹೋಗಿ ಕಾರ್ಮಿಕರನ್ನು ರಕ್ಷಿಸುತ್ತೇವೆ. ಅವರಿಗೆ ನೀರು, ಕೃತಕ ಆಮ್ಲಜನಕ ಸೇರಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ” ಎಂದು ಉತ್ತರಕಾಶಿ ಸರ್ಕಲ್‌ ಆಫೀಸರ್‌ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿದೆ. ಭಾನುವಾರ ಬೆಳಗಿನ (ನವೆಂಬರ್‌ 12) ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ಆರಂಭಿಸಿದೆ.

ಇದನ್ನೂ ಓದಿ: Tunnel Collapses: ನಿರ್ಮಾಣ ಹಂತದ ಸುರಂಗ ಕುಸಿದು 40 ಜನ ಸಿಲುಕಿರುವ ಶಂಕೆ; ರಕ್ಷಣೆಗೆ ಹರಸಾಹಸ

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿಯು ಹಗಲು ರಾತ್ರಿ ಎನ್ನದೆ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ.

Exit mobile version