Site icon Vistara News

ನಾವ್ಯಾರೂ ವಿಶ್ರಮಿಸುವಂತಿಲ್ಲ; ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತು

PM Narendra Modi

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಪ್ರಮುಖರಿಗೆ ಕರೆನೀಡಿದ್ದಾರೆ. ಇಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ʼವಂಶಾಡಳಿತ ರಾಜಕಾರಣʼದ ವಿರುದ್ಧ ಹೋರಾಡಲು ʼಅಭಿವೃದ್ಧಿ ರಾಜಕಾರಣʼ ಅಸ್ತ್ರ ಬಳಸಿ ಎಂದೂ ಸಲಹೆ ನೀಡಿದರು. ಹಾಗೇ, ಸರ್ಕಾರದ ಪ್ರತಿಯೋಜನೆಗಳೂ ಅರ್ಹ ಫಲಾನುಭವಿಗಳನ್ನು ತಲುಪುವಂತೆ ಮಾಡಬೇಕು. ಯಾವುದೇ ಸಮಸ್ಯೆಗಳು, ಅಡೆತಡೆಗಳ ನೆಪ ಹೇಳುವಂತಿಲ್ಲ ಎಂದೂ ಹೇಳಿದ್ದಾರೆ.

ಮಾಡಬೇಕಾದ ಕೆಲಸಗಳ ರಾಶಿ ನಮ್ಮ ಮುಂದಿದೆ. ಹೀಗಾಗಿ ನಾವ್ಯಾರೂ ವಿಶ್ರಾಂತಿ ಪಡೆಯುವಂತೆ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಋಣವನ್ನೆಂದೂ ನಾವು ತೀರಿಸಲಾರೆವು. ಅದರ ಬದಲಿಗೆ ದೇಶದ ಜನರ ಸೇವೆ ಮಾಡಬಹುದು. ದೇಶಾದ್ಯಂತ ಕೋಟ್ಯಂತರ ಜನ ಬಿಜೆಪಿ ಕಾರ್ಯಕರ್ತರಿದ್ದಾರೆ. ಅವರೆಲ್ಲರ ಬಗ್ಗೆಯೂ ನನಗೆ ಅಪಾರ ಗೌರವ ಇದೆ. ಆದರೆ ಪಕ್ಷದಲ್ಲಿ ಪ್ರಮುಖ ಪದಾಧಿಕಾರಿಗಳಿಂದ ಹಿಡಿದು, ಕಾರ್ಯಕರ್ತನವರೆಗೆ ಪ್ರತಿಯೊಬ್ಬರೂ ಪಕ್ಷ ಸಂಘಟನೆ, ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೆ, ನಾವು ದೇಶಾದ್ಯಂತ 1300 ಶಾಸಕರು, 400 ಸಂಸದರು ಮತ್ತು 100ಕ್ಕೂ ಹೆಚ್ಚು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದೇವೆ. ನಾವು ನಮ್ಮ ಅಧಿಕಾರವನ್ನು ಆನಂದಿಸುವುದರ ಮೇಲೆ ಮಾತ್ರ ಗಮನವವನ್ನು ಕೇಂದ್ರೀಕರಿಸಿದ್ದರೆ, ನಾವೂ ಕೂಡ ಅದೊಂದನ್ನೇ ಮಾಡುತ್ತ ಕುಳಿತಿರುತ್ತಿದ್ದೆವು. ಆದರೆ ಆ ದಾರಿ ನಮಗೆ ಬೇಡ. ನಾವು ಕೆಲಸ ಮಾಡೋಣ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ 2030ರೊಳಗೆ 6ಜಿ ನೆಟ್‌ವರ್ಕ್‌ ಬರಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ

2014ಕ್ಕೂ ಮೊದಲು ದೇಶದ ಜನರು ಸರ್ಕಾರಗಳ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದರು. ಸರ್ಕಾರ ಕೆಲಸ ಮಾಡುವುದಿಲ್ಲ, ನಮ್ಮ ಜೀವನ ಸುಧಾರಿಸುವುದಿಲ್ಲ ಎಂಬ ಭಾವ ಅವರಲ್ಲಿತ್ತು. ಆದರೆ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಜನರ ಅನಿಸಿಕೆಯನ್ನು ಬದಲಿಸಿದೆ. ಭರವಸೆ ಹೆಚ್ಚಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಜನರ ನಿರೀಕ್ಷೆ ಹೆಚ್ಚಾಗಿದೆ, ಅದನ್ನು ಪೂರೈಸುವ ಪ್ರಯತ್ನ ನಮ್ಮದಾಗಿರಬೇಕು ಎಂದಿದ್ದಾರೆ.

ಬಿಜೆಪಿ ಕೇಂದ್ರ ಸರ್ಕಾರದ ಎಂಟು ವರ್ಷಗಳ ಆಡಳಿತದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷವನ್ನು ಸಂಕಲ್ಪ, ಸೇವೆ, ಬಡವರ ಕಲ್ಯಾಣ, ಸಣ್ಣ ರೈತರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಪೂರೈಸಲು ಮೀಸಲಿಡಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಹಾಗೂ ಮಹಿಳೆಯರ ಪತಿಷ್ಠೆ ರಕ್ಷಣೆಯನ್ನು ಸಾಧಿಸಲಾಗಿದೆ. ಅದಕ್ಕೂ ಮಿಗಿಲಾಗಿ, ಈ ಹಿಂದಿನ ಸರ್ಕಾರದ ಕಾರಣದಿಂದಾಗಿ ನಂಬಿಕೆಯನ್ನೇ ಕಳೆದುಕೊಂಡಿದ್ದ ಜನರ ವಿಶ್ವಾಸವನ್ನು ನಾವು ಗಳಿಸಿದ್ದೇವೆ ಎಂದರು.

ಇದನ್ನೂ ಓದಿ: ಮುಂದಿನ ಅವಧಿಗೂ ನಾನೇ ಪ್ರಧಾನಿಯೆಂದು ಪರೋಕ್ಷವಾಗಿ ಹೇಳಿದರಾ ನರೇಂದ್ರ ಮೋದಿ?

Exit mobile version