ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ತಾಳೆ ಮಾಡುವ ದಿಸೆಯಲ್ಲಿ ಇವಿಎಂ ಬಳಿ ಇರಿಸುವ ವಿವಿಪ್ಯಾಟ್‌ಗಳ ತಾಳೆಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಾವು ಚುನಾವಣೆ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್ ಜತೆ ತಾಳೆ ಹಾಕಿ ನೋಡಬೇಕು ಹಾಗೂ ವಿವಿಪ್ಯಾಟ್ ಸ್ಲಿಪ್‌ಗಳನ್ನು (VVPAT Verification) ಬ್ಯಾಲೆಟ್ ಬಾಕ್ಸ್‌ನಲ್ಲಿ ಠೇವಣಿ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗಳ ಸಂಬಂಧಿಸಿದಂತೆ ಚುನಾವಣೆ ಆಯೋಗದ (Election Commission) ಸ್ಪಷ್ಟನೆ ಪಡೆದ ಸರ್ವೋಚ್ಚ ನ್ಯಾಯಾಲಯವು (Supreme Court), ಶೇ.100ರಷ್ಟು ತಾಳೆಗೆ ನಿರ್ದೇಶನ ನೀಡಬೇಕು ಎಂಬ ಬಗೆಗಿನ ತೀರ್ಪನ್ನು ಕಾಯ್ದರಿಸಿತು.
“ನಾವು ಚುನಾವಣೆ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಚುನಾವಣೆ ಆಯೋಗವು ದೇಶದ ಸಂವಿಧಾನದ ಅನ್ವಯ ರಚಿಸಲಾದ ಸಂಸ್ಥೆಯಾಗಿದೆ. ಹಾಗಾಗಿ, ಅದರ ಕಾರ್ಯಚಟುವಟಿಕೆಗಳನ್ನು ನಾವು ನಿಯಂತ್ರಿಸಲು ಆಗುವುದಿಲ್ಲ. ಅನುಮಾನದ ಆಧಾರದ ಮೇಲೆ ನಾವು ಆದೇಶ ಹೊರಡಿಸಲು ಬರುವುದಿಲ್ಲ. ನೀವು (ಅರ್ಜಿದಾರರು) ಅನುಮಾನ ವ್ಯಕ್ತಪಡಿಸಿದಿರಿ ಎಂಬ ಮಾತ್ರಕ್ಕೆ ನಾವು ಯಾವುದೇ ಆದೇಶ ಹೊರಡಿಸಲು ಆಗುವುದಿಲ್ಲ. ಹಾಗೆಯೇ, ನಾವು ನಿಮ್ಮ ಯೋಚನಾ ಲಹರಿಯನ್ನೂ ಬದಲಿಸಲ್ಲ” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಾಂಕರ್ ದತ್ತಾ ನೇತೃತ್ವದ ನ್ಯಾಯಪೀಠ ತಿಳಿಸಿತು.
After seeking clarification from Election Commission official on certain queries, Supreme Court reserves its order on petitions seeking 100 percent verification of Electronic Voting Machines (EVMs) votes with their Voter Verifiable Paper Audit Trail (VVPAT) slips.
— ANI (@ANI) April 24, 2024
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳು ಆಗಬೇಕು. ಇವಿಎಂ ಮತಗಳನ್ನು ವಿವಿಪ್ಯಾಟ್ ಜತೆ ಶೇ.100ಕ್ಕೆ 100ರಷ್ಟು ತಾಳೆ ಮಾಡಬೇಕು” ಎಂಬುದಾಗಿ ತಿಳಿಸಿದರು. ಆಗ ನ್ಯಾಯಾಲಯವು, “ಚುನಾವಣೆ ಆಯೋಗದ ಪ್ರಕ್ರಿಯೆಗಳನ್ನು ಬದಲಿಸಲು, ಅದರ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ತಿಳಿಸಿತು.
ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಮತಯಂತ್ರಗಳ ಜತೆಗೆ ವಿವಿಪ್ಯಾಟ್‌ಗಳನ್ನೂ (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಇರಿಸುತ್ತದೆ. ಮತಎಣಿಕೆ ಮಾಡುವಾಗ ಇವಿಎಂನಲ್ಲಿ ದಾಖಲಾದ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು, ನಂತರ ಇವಿಎಂಗಳ ಜತೆ ತಾಳೆ ಮಾಡುವ ವಿಧಾನ ಇದೆ. ಆದರೆ, ಎಲ್ಲ ಇವಿಎಂಗಳ ಜತೆ ತಾಳೆ ಹಾಕಬೇಕು ಎಂಬುದು ಅರ್ಜಿದಾರರ ವಾದವಾಗಿದೆ.