ಹೈದ್ರಾಬಾದ್, ತೆಲಂಗಾಣ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ (Aaditya Thackeray) ಹೈದ್ರಾಬಾದ್ ಪ್ರವಾಸದಲ್ಲಿದ್ದು, ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ. ನಮ್ಮ ಹಿಂದುತ್ವವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಬಿಜೆಪಿ ಅನುಸರಿಸುವ ಹಿಂದುತ್ವದಲ್ಲಿ ನಮಗೆ ನಂಬಿಕೆ ಇಲ್ಲ. ಜನರು ಏನು ತಿನ್ನುತ್ತಾರೆಂದು ಗುರುತಿಸಿ ಅವರನ್ನು ಸುಟ್ಟು ಹಾಕುವ ಕೆಲಸವನ್ನು ನಾವು ಮಾಡುವುದಿಲ್ಲ. ಇದು ಬಿಜೆಪಿ ಕೆಲಸ. ಒಂದು ವೇಳೆ, ಬಿಜೆಪಿಯದ್ದು ಇದೇ ಹಿಂದುತ್ವವಾದರೆ, ಇದು ನನಗಾಗಲೀ, ನನ್ನ ತಂದೆಗಾಗಲೀ, ನನ್ನ ಅಜ್ಜನಿಗಾಗಲೀ, ನಮ್ಮ ಜನರು, ಮಹಾರಾಷ್ಟ್ರಕ್ಕೆ ಸ್ವೀಕಾರರ್ಹವಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಹೈದ್ರಾಬಾದ್‌ನ ಗೀತಮ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದಾಗಿ ರಾಮ ಮಂದಿರ ನಿರ್ಮಾಣವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಒಂದು ವೇಳೆ, ಕೇಂದ್ರ ಸರ್ಕಾರದಿಂದಾಗಿಯೇ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ನೀವು ಭಾವಿಸಿದರೆ, ನಿಮ್ಮ ಗ್ರಹಿಕೆ ತಪ್ಪು. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆಯೇ ಹೊರತು, ಕೇಂದ್ರ ಸರ್ಕಾರವಲ್ಲ ಎಂದು ಅವರು ಹೇಳಿದರು.
2014ರಲ್ಲಿ ಬಿಜೆಪಿ ಶಿವಸೇನೆ ಜೊತೆ ಮೈತ್ರಿ ಮುರಿದುಕೊಂಡಾಗ ನಾನೊಬ್ಬ ಹಿಂದೂ, 2014ರಲ್ಲಿ ಬಿಜೆಪಿ ಬೆನ್ನಿಗೆ ಚೂರಿ ಹಾಕಿತ್ತು. ಅಂದು ನಾವು ಹಿಂದೂಗಳು, ಈಗಲೂ ಹಿಂದೂಗಳೇ. ಇಂದು ರಾಜ್ಯದಲ್ಲಿ ಬಿಜೆಪಿ ಗಲಭೆ ಎಬ್ಬಿಸುತ್ತಿದೆ. ಕಾಶ್ಮೀರಿ ಪಂಡಿತರ ಸ್ಥಿತಿ ಏನಾಗಿದೆ? ವಿಶ್ವದ ಅತಿದೊಡ್ಡ ಹಿಂದುತ್ವವಾದಿ ಪಕ್ಷವು ಕಾಶ್ಮೀರಿ ಪಂಡಿತರ ಬಗ್ಗೆ ಏಕೆ ಮಾತನಾಡುವುದಿಲ್ಲ? ಇಂದು ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿರುವಾಗ ಕಾಶ್ಮೀರದಿಂದ ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿರಲು ಯಾರು ಕಾರಣ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಸೇರಿಕೊಂಡ ಆದಿತ್ಯ ಠಾಕ್ರೆ; ರಾಹುಲ್ ಗಾಂಧಿ ಪಕ್ಕದಲ್ಲಿ ಹೆಜ್ಜೆಹಾಕಿದ ಉದ್ಧವ್ ಪುತ್ರ
ಒಂದು ವೇಳೆ ಬಿಜೆಪಿಗೆ ನಮ್ಮ ಅಜ್ಜನ ಸಿದ್ಧಾಂತದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ನಮ್ಮ ಅಜ್ಜ ಕಟ್ಟಿ ಬೆಳೆಸಿದ ಪಕ್ಷವನ್ನು ಅವರು ಮುಗಿಸಲು ಹೋಗುತ್ತಿರಲಿಲ್ಲ ಎಂದು ಠಾಕ್ರೆ ಅವರು ಹೇಳಿದರು. ಇದೇ ವೇಳೆ, ಏಕನಾಥ ಶಿಂಧೆ ಪಕ್ಷಕ್ಕೆ ದೊಡ್ಡ ಬೆದರಿಕೆಯಾಗಿದ್ದಾರೆಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನೂ ಅನ್ನಿಸುವುದಿಲ್ಲ. ಅವರೊಂದಿಗೆ ಯಾವುದೇ ವೈಯಕ್ತಿಕ ವೈರತ್ವ ಇಲ್ಲ ಎಂದು ಹೇಳಿದರು.