Site icon Vistara News

Lok Sabha Election: ಕಾಂಗ್ರೆಸ್‌ ಬಳಿ ದುಡ್ಡಿಲ್ಲ ಎಂದ ಖರ್ಗೆ; ಚುನಾವಣೆಯಲ್ಲಿ ಪಕ್ಷದ ಗತಿ ಏನು?

Mallikarjun Kharge

Election Commission, Congress face off over voter turnout data

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಸಕಲ ರೀತಿಯಲ್ಲಿ ಸಜ್ಜಾಗುತ್ತಿವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ, ಪಟ್ಟಿ ಬಿಡುಗಡೆ, ಚುನಾವಣೆ ಪ್ರಚಾರ, ಜನರ ಮುಂದಿಡಬೇಕಾದ ವಿಷಯಗಳು ಸೇರಿ ಹತ್ತಾರು ರೀತಿಯಲ್ಲಿ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಇದರ ಮಧ್ಯೆಯೇ, ಲೋಕಸಭೆ ಚುನಾವಣೆಗೆ ಖರ್ಚು ಮಾಡಲು ದುಡ್ಡಿಲ್ಲ (Congress Funds) ಎಂಬುದಾಗಿ ಕಾಂಗ್ರೆಸ್‌ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದ್ದಾರೆ.

ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಹಲವು ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆಯು ತಡೆಹಿಡಿದ ಕುರಿತು ಮಾತನಾಡಿದ ಅವರು, “ಬಿಜೆಪಿಯು ಆದಾಯ ತೆರಿಗೆ ಇಲಾಖೆ ಮೂಲಕ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿದಿದೆ. ಭಾರಿ ಪ್ರಮಾಣದ ದಂಡ ವಿಧಿಸಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನವಿದ್ದರೂ ಬಿಜೆಪಿಯು ಚುನಾವಣಾ ಬಾಂಡ್‌ ಮೂಲಕ ಸಂಗ್ರಹಿಸಿದ ದೇಣಿಗೆ ಕುರಿತು ಮಾಹಿತಿ ನೀಡಲು ತಯಾರಿಲ್ಲ. ಆದರೆ, ನಮ್ಮ ಬ್ಯಾಂಕ್‌ ಖಾತೆಗಳನ್ನು ಮಾತ್ರ ಬಿಜೆಪಿ ಸ್ಥಗಿತಗೊಳಿಸಿದೆ” ಎಂದು ದೂರಿದರು. ಆ ಮೂಲಕ ಕಾಂಗ್ರೆಸ್‌ ಬಳಿ ಹಣವಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

Rahul Gandhi And Mallikarjun Kharge

“ಕಾಂಗ್ರೆಸ್‌ಗೆ ಸಾರ್ವಜನಿಕರು ದೇಣಿಗೆ ನೀಡಿದ್ದಾರೆ. ಆದರೆ, ಬಿಜೆಪಿಯು ನಮಗೆ ಜನ ನೀಡಿದ ಹಣ ಇರುವ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ, ನಮ್ಮ ಬಳಿ ಖರ್ಚು ಮಾಡಲು ಹಣವಿಲ್ಲ. ಆದರೆ, ಬಿಜೆಪಿ ಮಾತ್ರ ಯಾರಿಂದ ಹಣ ಸಂಗ್ರಹಿಸಿದೆ ಎಂಬುದರ ಕುರಿತು ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಲು ಅವರು ಜೂನ್‌ವರೆಗೆ ಸಮಯವನ್ನೂ ಕೇಳಿದ್ದರು” ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಬಾಂಡ್‌ಗಳ ಕುರಿತು ಮಾಹಿತಿ ನೀಡಲು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಕಾಲಾವಕಾಶ ಕೇಳಿತ್ತು. ಇದನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿತ್ತು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್

ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಹಲವು ಖಾತೆಗಳಿಗೆ ತಡೆಹಿಡಿದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದ ಹಲವು ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಐಟಿ ಇಲಾಖೆಯು ಹಣ ವಿತ್‌ಡ್ರಾ ಮಾಡಿದೆ. ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ರೂ. ಪಡೆಯಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version