ನವದೆಹಲಿ: 17ನೇ ಲೋಕಸಭೆಯ (17th Lok Sabha) ಕೊನೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಎಲ್ಲ ಸಂಸದರು (MPs) ಹಾಗೂ ಸ್ಪೀಕರ್ (Lok Sabha Speaker) ಅವರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ಸರ್ಕಾರವು ಹೇಗೆ ವಂಚಿತರಿಗೆ, ಮಂಗಳಮುಖಿಯರಿಗೆ (transgender) ನೆರವು ನೀಡಿತು, ಅವರನ್ನು ಗುರುತಿಸಿತು ಎಂಬುದನ್ನು ವಿವರಿಸಿದರು. ಮಂಗಳಮುಖಿ ಸಮುದಾಯವು ಯಾವಾಗಲೂ ಅಗೌರವವನ್ನು ಅನುಭವಿಸುತ್ತಿತ್ತು. 17 ನೇ ಲೋಕಸಭೆಯ ಸದಸ್ಯರು ಅವರ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಅವರಿಗೆ ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದರು. ಭಾರತವು ಮಂಗಳಮುಖಿಯರಿಗಾಗಿ ಏನು ಮಾಡಿದೆ ಎಂದು ಜಗತ್ತು ಚರ್ಚಿಸುತ್ತದೆ. ನಾವು ತೃತೀಯಲಿಂಗಿಗಳಿಗೆ ಅಸ್ತಿತ್ವವನ್ನು ನೀಡಿದ್ದೇವೆ, ಅವರನ್ನುಗುರುತಿಸಿದ್ದೇವೆ. ತೃತೀಯಲಿಂಗಿ ಸಮುದಾಯಕ್ಕೆ 16,000-17,000 ಗುರುತಿನ ಚೀಟಿಗಳನ್ನು ನೀಡಲಾಗಿದೆ. ಪದ್ಮ ಪ್ರಶಸ್ತಿಗಳ ಮೂಲಕ ಅವರನ್ನು ಸನ್ಮಾನಿಸಿದ್ದೇವೆ (Padma Awards) ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ತೃತೀಯಲಿಂಗಿ ಸಮುದಾಯದ ಜನರು ಮುದ್ರಾ ಯೋಜನೆಯಡಿ ಸಾಲ ಪಡೆದು ವ್ಯಾಪಾರ ಆರಂಭಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು. “ನಾವು ತೃತೀಯಲಿಂಗಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದ್ದೇವೆ. ಅವರು ಮೊದಲು ಮಾಡದ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲಾರಂಭಿಸಿದ್ದಾರೆ. ಅವರು ಈಗ ಗೌರವದ ಜೀವನ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು. 2019ರಲ್ಲಿ ನರ್ತಕಿ ನಟರಾಜ ಅವರು ಪದ್ಮ ಪ್ರಶಸ್ತಿ ಪಡೆದ ಮೊದಲ ತೃತೀಯಲಿಂಗಿಯಾಗಿದ್ದಾರೆ. ಕರ್ನಾಟಕದವರೇ ಆದ ಮಂಜಮ್ಮ ಜೋಗತಿ ಅವರೂ ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಚುನಾವಣೆಗಳು ದೂರಿಲ್ಲ, ಕೆಲವರಿಗೆ ನರ್ವಸ್ ಆಗಬಹುದು….
”ಚುನಾವಣೆಗಳು ದೂರಿಲ್ಲ(Lok Sabha Election 2024). ಈ ಚುನಾವಣೆಯಿಂದ ಕೆಲವರು ನರ್ವಸ್ ಆಗಿರಬಹುದು. ಆದರೆ, ಚುನಾವಣೆ ಪ್ರಜಾಪ್ರಭುತ್ವದ ಅಗತ್ಯ ಸಂಗತಿಯಾಗಿದೆ. ನಾವು ಇದನ್ನು ಹೆಮ್ಮೆಯಿಂದ ಸ್ವೀಕರಿಸೋಣ. ಈ ಚುನಾವಣೆಗಳು ನಮ್ಮ ದೇಶದ ಹೆಮ್ಮೆಯನ್ನು ಹೆಚ್ಚಿಸಲಿವೆ ಮತ್ತು ಪ್ರಜಾಪ್ರಭುತ್ವದ ಸಂಪ್ರಾದಯವನ್ನು ಪಾಲಿಸುವ ಮೂಲಕ ಜಗತ್ತಿಗೆ ಆಶ್ಚರ್ಯವನ್ನುಂಟು ಮಾಡಲಿವೆ” ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಈ ಐದು ಅವಧಿಯಲ್ಲಿ ಕೊರೊನಾ ಮಹಾ ಮಾರಿಯ ಮಧ್ಯೆಯೂ ಸದನವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು ಎಂದು ಸ್ಪೀಕರ್ ಅವರನ್ನು ಹಾಡಿ ಹೊಗಳಿದರು. ಅಲ್ಲದೇ, 17ನೇ ಲೋಕಸಭೆಯು ಅನೇಕ ಮಹತ್ವದ ಕಾನೂನುಗಳನ್ನು ಜಾರಿಗೆ ತಂದಿದೆ, ಅನೇಕ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಈ ಪೈಕಿ, ದೇಶಕ್ಕೆ ಒಂದೇ ಸಂವಿಧಾನ ಇರಬೇಕು (Single Constitution) ಎಂಬ ಬಹು ಪೀಳಿಗೆಯ ನಿರೀಕ್ಷೆಯನ್ನು ಸಾಬೀತು ಮಾಡಲಾಯಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಮಾಡುವ ಬಹು ಮುಖ್ಯ ನಿರ್ಣಯವನ್ನು ಈ ಲೋಕಸಭೆ ಕೈಗೊಂಡಿದೆ ಎಂದು ಮೋದಿ ಅವರು ಹೇಳಿದರು.
ಸಂಸದ ನಿಧಿ ಬಿಟ್ಟು ಕೊಟ್ಟ ಸದಸ್ಯರು
ಕೊರೊನಾ ಸಮಯದಲ್ಲಿ ಸಂಸದರು ತಮ್ಮ ನಿಧಿಯನ್ನು ಬಿಟ್ಟುಕೊಡುವಂತೆ ವಿನಂತಿ ಮಾಡಲಾಯಿತು. ಎಲ್ಲ ಸಂಸದರು ಸಂಸದ ನಿಧಿಯನ್ನು ಬಿಟ್ಟುಕೊಟ್ಟರು. ದೇಶವಾಸಿಗಳಿಗೆ ಸಕಾರಾತ್ಮಕ ಸಂದೇಶ ಸಾರಲು ಸಂಸದರು ತಮ್ಮ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲು ನಿರ್ಣಯ ಮಾಡಿದರು. ಇದರಿಂದ ದೇಶಕ್ಕೆ ವಿಶ್ವಾಸವಾಯಿತು. ನಾವು ಎಲ್ಲರೂ ಮಾಧ್ಯಮಗಳಲ್ಲಿ ಬೈಗಳು ತಿಂದಿದ್ದೇವೆ. ಕ್ಯಾಂಟೀನ್‌ನಲ್ಲಿ ದರವನ್ನು ಏರಿಸಿದರು. ಇದಕ್ಕೆ ಸಂಸದರು ಯಾವುದೇ ವಿರೋಧ ವ್ಯಕ್ತ ಮಾಡಲಿಲ್ಲ ಎಂದು ಹೇಳಿದರು. ಸ್ವತಂತ್ರ ಭಾರತದ ಮೊದಲ ಕ್ಷಣವನ್ನು ನೆನಪಿಡಲು ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅವರನ್ನು ಪ್ರತಿಷ್ಠಾಪಿಸಲಾಯಿತು. ಇದು ನಿಮ್ಮ(ಸ್ಪೀಕರ್) ನೇತೃತ್ವದಲ್ಲಿ ನಡೆಯಿತು. ಮುಂಬರುವ ಪೀಳಿಗೆಗೆ ಇದು ಪ್ರೇರಣೆ ನೀಡಲಿದೆ ಎಂದು ಹೇಳಿದರು.
ಭಾರತಕ್ಕೆ ಜಿ20 ಅಧ್ಯಕ್ಷತೆಯ ಅವಕಾಶ
ಜಿ20 ಅಧ್ಯಕ್ಷತೆಯು ಭಾರತಕ್ಕೆ ದೊರೆಯಿತು. ಭಾರತಕ್ಕೆ ಬಹಳ ಸಮ್ಮಾನ ದೊರೆಯಿತು. ಎಲ್ಲ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ವಿಶ್ವದ ಮುಂದೆ ಭಾರತದ ಸಾಮರ್ಥ್ಯವನ್ನು, ತಮ್ಮ ರಾಜ್ಯದ ಗುರುತನ್ನು ಪ್ರಸ್ತುತಪಡಿಸಿದರು. ಅನೇಕ ದೇಶಗಳ ಸ್ಪೀಕರ್ ಅವರು ಇಲ್ಲಿಗೆ ಬಂದರು, ದೇಶದ ಮಹಾನ್ ಪರಂಪರೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀವು ಸ್ಪೀಕರ್ ಸಮಾವೇಶದ ಮುಂದೆ ತೆರೆದಿಟ್ಟಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.
ಪೇಪರ್ ಲೆಸ್ ಸಂಸತ್
ಸಂಸತ್ ಲೈಬ್ರರಿಯನ್ನು ಯಾರು ಬಳಸುತ್ತಾರೋ ಗೊತ್ತಿಲ್ಲ. ನೀವು ಅದರ ಬಾಗಿಲನ್ನು ಸಾಮಾನ್ಯ ವ್ಯಕ್ತಿಗೆ ತೆರಿದಿರಿ. ದೊಡ್ಡ ಕೆಲಸವನ್ನು ಮಾಡಿದ್ದೀರಿ. ನಿಮಗೆ ಅಭಿನಂದನೆ. ಪೇಪರ್ ಲೆಸ್ ಪಾರ್ಲಿಮೆಂಟ್ ಮಾಡಿದ್ದೀರಿ. ನೀವು ಆಧುನಿಕ ತಂತ್ರಜ್ಞಾವನ್ನು ಬಳಸಿದ್ದೀರಿ. ಆರಂಭದಲ್ಲಿ ಕೆಲವರಿಗೆ ತೊಂದರೆಯಾಯಿತು. ಆದರೆ, ಈಗ ಎಲ್ಲರೂ ಅದಕ್ಕೆ ಹೊಂದಾಣಿಕೆಯಾಗುತ್ತಿದ್ದಾರೆ. ಇದು ನಿಮ್ಮ ಅತ್ಯುತ್ತಮ ಕೆಲಸವಾಗಿದೆ. ಸಂಸದರು ಮತ್ತು ನಿಮ್ಮ ಪ್ರಯತ್ನದಿಂದಾಗಿ 17ನೇ ಲೋಕಸಭೆ ಉತ್ಪಾದಕತೆಯು ಶೇ.90ರಷ್ಟಿದೆ. ನಾವು ಸಂಕಲ್ಪದೊಂದಿಗೆ 18ನೇ ಲೋಕಸಭೆಯನ್ನು ಆರಂಭಿಸೋಣ. ಶೇ.100ರಷ್ಟು ಉತ್ಪಾದಕತೆಯನ್ನು ನಿರೀಕ್ಷಿಸೋಣ. ಈ ಎಲ್ಲ ಯಶಸ್ಸಿಗೆ ಸಂಸದರು, ಸಂಸದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಅವರು ಹೇಳಿದರು.
ಬದಲಾವಣೆಯತ್ತ ದೇಶ
75 ವರ್ಷದ ಬಳಿಕ ನಮ್ಮ ಸದನವು ಮಹತ್ವದ ಕೆಲಸಗಳಿಗೆ ನೇತೃತ್ವವನ್ನು ವಹಿಸಿದೆ. ಅಮೃತಕಾಲವನ್ನು ದೇಶವನ್ನು ಸಂಭ್ರಮಿಸಿದೆ. ಇದರಲ್ಲಿ ಸಂಸತ್ ಮತ್ತು ಸಂಸದರ ದೊಡ್ಡ ಪಾತ್ರವಿದೆ. ಸಂವಿಧಾನ ಜಾರಿಯಾಗಿರುವ 75 ವರ್ಷವಾಗಿದೆ. ಇದು ಕೂಡ ಈ ಸದನದ ಗೌರವವಾಗಿದೆ. ಈ ಅವಧಿಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. 21ನೇ ಶತಮಾನವು ಭಾರತದ್ದಾಗಿದೆ. ದೊಡ್ಡ ಬದಲಾವಣೆಯತ್ತ ದೇಶ ಮುಂದುವರಿಯುತ್ತಿದೆ. ಇದರಲ್ಲಿ ಸದನದ ಎಲ್ಲರೂ ಮಾರ್ಗದರ್ಶ ಮಾಡಿದ್ದಾರೆ. ನಮ್ಮ ಅನೇಕ ಪೀಳಿಗೆಯು ನಿರೀಕ್ಷಿಸಿದ್ದ ಅನೇಕ ಕೆಲಸವು ಈ 17ನೇ ಲೋಕಸಭೆಯು ಮಾಡಿದೆ.
ಈ ಸುದ್ದಿಯನ್ನೂ ಓದಿ: Narendra Modi: ‘ಇಂಥ ಅವಕಾಶ ಮತ್ತೆ ಸಿಗಲಾರದು….’ ಖರ್ಗೆ ಕಾಲೆಳೆದ ಪ್ರಧಾನಿ ನರೇಂದ್ರ ಮೋದಿ