ನವದೆಹಲಿ: ಸಂಸತ್ತಿನಿಂದ 140ಕ್ಕೂ ಅಧಿಕ ಪ್ರತಿಪಕ್ಷಗಳ ಸಂಸದರನ್ನು (opposition MPs suspended) ಅಮಾನತು ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ (Congress Party) ನೇತೃತ್ವದ ಇಂಡಿಯಾ ಕೂಟ ಶುಕ್ರವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ(INDIA Bloc Protest). ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಸಂಸತ್ ಭದ್ರತಾ ಲೋಪ ಪ್ರಕರಣವನ್ನು ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಸಮೀಕರಿಸಿದರು. ಅಲ್ಲದೇ, ಯುವಕರು ಲೋಕಸಭೆಯಲ್ಲಿ ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದಾಗ ಬಿಜೆಪಿ ಸಂಸದರು (BJP MPs) ಅಲ್ಲಿಂದ ಓಡಿ ಹೋದರು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.
ಕೆಲವು ದಿನಗಳ ಹಿಂದೆ ಇಬ್ಬರು ಯುವಕರು ಲೋಕಸಭೆಯ ಸಂಸದರ ಇರುವ ಸ್ಥಾನಕ್ಕೆ ಜಂಪ್ ಮಾಡಿದರು. ಆಗ ನಾವೆಲ್ಲ ನೋಡಿದ್ದೇವೆ; ಅವರು ಒಳಗೆ ಬಂದರು ಮತ್ತು ಹೊಗೆಯನ್ನು ಸ್ಪ್ರೇ ಮಾಡಿದರು. ಆಗ ಬಿಜೆಪಿಯ ಎಲ್ಲ ಸಂಸದರು ಅಲ್ಲಿಂದ ಓಡಿ ಹೋದರು. ಅವರು ತಮ್ಮನ್ನು ತಾವು ರಾಷ್ಟ್ರವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಆದವರೆ ಅವರೆಷ್ಟು ಪುಕ್ಕಲರು ಎಂಬುದು ಅವತ್ತು ಗೊತ್ತಾಯಿತು ಎಂದು ಬಿಜೆಪಿಯ ಕಾಲೆಳೆದಿದ್ದಾರೆ.
LIVE: INDIA Protests Against Suspension of MPs | Jantar Mantar, New Delhi https://t.co/DHFxeER36C
— Rahul Gandhi (@RahulGandhi) December 22, 2023
ಮೊದಲನೆಯದಾಗಿ, ಆ ಜನರು ಹೇಗೆ ಒಳಗೆ ಬಂದರು, ಅವರು ಸಂಸತ್ತಿನ ಒಳಗೆ ಗ್ಯಾಸ್ ಸ್ಮೋಕ್ ಕ್ಯಾನ್‌ಸ್ಟರ್‌ಗಳನ್ನು ಹೇಗೆ ತಂದರು, ಅವರು ಅದನ್ನು ತರಲು ಸಾಧ್ಯವಾದರೆ ಅವರು ಏನನ್ನಾದರೂ ತರಬಹುದಿತ್ತಲ್ಲವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನಿಸಿದರು.
ಎರಡನೇ ಪ್ರಶ್ನೆ ಏನೆಂದರೆ, ಅವರು ಸಂಸತ್ತಿನಲ್ಲಿ ಪ್ರತಿಭಟಿಸಿದರು? ಅವರ ಈ ಪ್ರತಿಭಟನೆಗೆ ನಿರುದ್ಯೋಗ ಕಾರಣವಾಗಿದೆ. ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಈ ದೇಶದ ಯುವಕರು ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಅವರು ಬಿಜೆಪಿಯ ವಿರುದ್ಧ ಕಿಡಿಕಾರಿದರು.
ನಿರುದ್ಯೋಗದ ಕಾರಣದಿಂದ ಯುವ ಜನತೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸರಾಸರಿ 7.5 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಫಿಂಗ್ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಯುವಕರ ಸ್ಥಿತಿಯ ಬಗ್ಗೆ ವಿಷಾದಿಸಿದರು. ಇದೇ ವೇಳೆ ಮಾಧ್ಯಮಗಳ ವಿರುದ್ದ ಹರಿಹಾಯ್ದ ರಾಹುಲ್ ಗಾಂಧಿ ಅವರು, ಮಾಧ್ಯಮಗಳು ನಿರುದ್ಯೋಗ ಅಥವಾ ಕೋಟ್ಯಂತರ ಜನರ ದನಿಯನ್ನು ಅಡಗಿಸುವುದಕ್ಕಾಗಿ ಪ್ರತಿಪಕ್ಷಗಳ ಸಂಸದರನ್ನು ಅಮಾನತು ಮಾಡಿದ್ದನ್ನು ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದರು. ಈ ಮಾಧ್ಯಮಗಳು ಕೇವಲು, ರಾಹುಲ್ ಗಾಂಧಿ ಅವರು ಮಿಮಿಕ್ರಿ ಮಾಡುತ್ತಿರುವ ವಿಡಿಯೋದ ಬಗ್ಗೆ ಚರ್ಚೆ ಮಾಡುತ್ತಿವೆ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವ ಉಳಿಸಿ ಹೆಸರಿನಲ್ಲಿ ಇಂಡಿಯಾ ಕೂಟದ ನಾಯಕರು ದಿಲ್ಲಿಯ ಜಂತರ್ – ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಎನ್‌ಸಿಪಿಯ ನಾಯಕ ಶರದ್ ಪವಾರ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿಪಿಎಂನ ಸೀತಾರಾಮ್ ಯೆಚೂರಿ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಈ ಸುದ್ದಿಯನ್ನೂ ಓದಿ: Congress Protest: ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ; ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ