ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ವಾಪಸ್ ಭಾರತಕ್ಕೆ ಪಡೆಯಬೇಕು ಎಂಬ ಆದೇಶ ಬಂದರೆ, ಅದನ್ನು ಕಾರ್ಯಗತಗೊಳಿಸಲು ನಮ್ಮ ಸೇನೆ ಸಜ್ಜಾಗಿದೆ. ಕೇವಲ ಇದು ಅಂತಲ್ಲ, ಇಂಥ ಅದೆಷ್ಟೇ ಆದೇಶಗಳನ್ನು ಭಾರತೀಯ ಸೇನೆ ನೀಡಿದರೂ ನಾವು ಅದನ್ನು ಪಾಲಿಸುತ್ತೇವೆ ಎಂದು ಸೇನೆಯ ಉತ್ತರವಲಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಕಳೆದ ತಿಂಗಳು ಶೌರ್ಯ ದಿವಸ್ ಆಚರಣೆ ವೇಳೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್, ‘ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಸಂಪೂರ್ಣವಾಗಿ ಭಾರತದ ವಶಕ್ಕೆ ಪಡೆದ ಬಳಿಕವಷ್ಟೇ, 2019ರ ಆಗಸ್ಟ್ 5ರಂದು ಪ್ರಾರಂಭ ಮಾಡಿರುವ ಜಮ್ಮು-ಕಾಶ್ಮೀರ ಏಕೀಕರಣ ಮಿಷನ್ ಪೂರ್ಣಗೊಳ್ಳಲಿದೆ’ ಎಂಬಂಥ ಒಂದು ಮಹತ್ವದ ಮಾತುಗಳನ್ನಾಡಿದ್ದರು. ‘ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ಪಾಕಿಸ್ತಾನವು ಹದ್ದು ಮೀರಿ ವರ್ತಿಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ – ಬಾಲ್ಟಿಸ್ತಾನ್ ಮತ್ತು ಪಿಒಕೆಯ ಪ್ರದೇಶಗಳು ಭಾರತದೊಂದಿಗೆ ವಿಲೀನಗೊಳ್ಳುವ ದಿನಗಳು ದೂರವಿಲ್ಲ’ ಎಂದು ಖಡಕ್ ಎಚ್ಚರಿಕೆಯನ್ನೂ ನೆರೆರಾಷ್ಟ್ರಕ್ಕೆ ಕೊಟ್ಟಿದ್ದರು.
ರಾಜನಾಥ ಸಿಂಗ್ ಅವರ ಆ ಮಾತುಗಳನ್ನು ಸೇನೆಯ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅನುಮೋದಿಸಿದ್ದಾರೆ. ‘ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಯಾವುದೇ ಆದೇಶ ನೀಡಿದರೂ ನಾವದನ್ನು ಪಾಲಿಸಲು ಬದ್ಧರಾಗಿದ್ದೇವೆ. ಈಗ ಜಮ್ಮು-ಕಾಶ್ಮೀರದಲ್ಲಿ ಸುಮಾರು 300 ಉಗ್ರರು ಸಕ್ರಿಯರಾಗಿದ್ದಾರೆ. ಇನ್ನೂ 160 ಜನರು ಗಡಿ ದಾಟಿ ಬರಲು ಕಾಯುತ್ತಿದ್ದಾರೆ. ನಾವು ಉಗ್ರರ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದ್ದೇವೆ. ಆರ್ಟಿಕಲ್ 370 (ವಿಶೇಷ ಸ್ಥಾನಮಾನ) ರದ್ದು ಗೊಳಿಸಿದ ಬಳಿಕ ಉಗ್ರ ಚಟುವಟಿಕೆಗಳು ಕಡಿಮೆಯಾಗಿವೆ. ಇಲ್ಲಿ ಶಾಂತಿ ಮತ್ತು ಅಭಿವೃದ್ಧಿ ನೆಲೆಸುತ್ತಿದೆ. ಇಲ್ಲಿನ ಸ್ಥಳೀಯ ಆಡಳಿತ ಅತ್ಯುತ್ತಮವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಇದನ್ನೂ ಓದಿ: Rajnath Singh | ಶೀಘ್ರವೇ ಭಾರತಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನ್, ಪಿಒಕೆ! ಪಾಕ್‌ಗೆ ರಾಜನಾಥ್ ಸಿಂಗ್ ಎಚ್ಚರಿಕೆ