Site icon Vistara News

Weather Report: ಈ ಆಗಸ್ಟ್‌ ಅತ್ಯಂತ ಒಣ ಒಣ; 122 ವರ್ಷಗಳಲ್ಲೇ ಅತಿ ಕಡಿಮೆ ಮಳೆ; ಸೆಪ್ಟೆಂಬರ್‌ ಹೇಗಿರುತ್ತೆ?

driest august

ಹೊಸದಿಲ್ಲಿ: 1901ರಲ್ಲಿ ಹವಾಮಾನ ದಾಖಲೆ (weather records) ಪ್ರಾರಂಭವಾದಾಗಿನಿಂದಲೂ ಈ ಆಗಸ್ಟ್ (driest august) ತಿಂಗಳೇ ಇಡೀ ದೇಶಕ್ಕೆ ಅತ್ಯಂತ ಒಣ, ಅತೀ ಕಡಿಮೆ ಮಳೆಯಾಗಿರುವ ತಿಂಗಳೆನಿಸಿದೆ.

ಈ ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆ (monsoon rain) ಅತ್ಯಂತ ಕಡಿಮೆಯಾಗಿದ್ದು, 1901ರ ಬಳಿಕ 122 ವರ್ಷಗಳಲ್ಲೇ ಕಡಿಮೆಯಂತೆ. ಆಗಸ್ಟ್‌ನಲ್ಲಿ ಮಧ್ಯ ಭಾರತ ಮತ್ತು ದಕ್ಷಿಣ ಭಾರತದಾದ್ಯಂತ ಮಳೆಯಾಗಿಲ್ಲ. ಇದು ಇತಿಹಾಸದಲ್ಲೇ ಅತಿ ಕೆಟ್ಟ ಮಾನ್ಸೂನ್ ಕೊರತೆಯ ತಿಂಗಳುಗಳಲ್ಲಿ ಒಂದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (Weather report) ತಿಳಿಸಿದೆ. 1965ರಲ್ಲಿ 192.3 ಮಿಮೀ ಮಳೆಯಾಗಿತ್ತು. ಈ ಆಗಸ್ಟ್‌ನಲ್ಲಿ ಮತ್ತೂ ಕಡಿಮೆ. ಇಡೀ ಭಾರತದ ಮಳೆಯ ಸರಾಸರಿ 191.2 ಮಿಮೀ ಆಗಿದೆ. ದೇಶದ ಸರಾಸರಿ ಗರಿಷ್ಠ ಮತ್ತು ಸರಾಸರಿ ತಾಪಮಾನ ಎರಡೂ 1901ರಿಂದ ಅತ್ಯಧಿಕವಾಗಿವೆ.

ಆಗಸ್ಟ್ 5ರಿಂದ 16ರವರೆಗೆ ಮತ್ತು ಆಗಸ್ಟ್ 27ರಿಂದ 31ರವರೆಗೆ ಎರಡು ಹಂತಗಳಲ್ಲಿ ಮಾನ್ಸೂನ್‌ ವಿರಾಮ ನೀಡಿತು. ಮಾನ್ಸೂನ್‌ನ ನಿಮ್ನ ಪ್ರದೇಶ ಅದರ ಸಾಮಾನ್ಯ ಸ್ಥಿತಿಗಿಂತ ಉತ್ತರಕ್ಕೆ ಹೆಚ್ಚಾಗಿತ್ತು. ಇದು ಬಯಲು ಪ್ರದೇಶದ ಮೇಲೆ ಮಳೆಗೆ ಹೆಚ್ಚು ಪ್ರತಿಕೂಲವಾಯಿತು. ಎಲ್ ನಿನೋ ಪರಿಸ್ಥಿತಿಗಳು ತುಂಬಾ ಪ್ರಬಲವಾಗಿದ್ದು ಅದು ಮಳೆಯ ಮೇಲೆ ಪ್ರಭಾವ ಬೀರಿತು. ಪೂರ್ವಕ್ಕೆ ಮೋಡಗಳ ಚಲನೆ (Madden-Julian Oscillation) ಕೂಡ ಪ್ರತಿಕೂಲವಾಗಿದೆ ಎಂದು ಐಎಂಡಿ ಮಹಾನಿರ್ದೇಶಕ ಎಂ. ಮೊಹಪಾತ್ರ ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಮಳೆ ಹೇಗಿರಲಿದೆ? ಇದು ದೀರ್ಘಾವಧಿಯ ಸರಾಸರಿಯಾಗಿರುವ 91ರಿಂದ 109%ರ ನಡುವೆ ಸಾಮಾನ್ಯವಾಗಿರುತ್ತದೆ ಎಂದು IMD ಮುನ್ಸೂಚನೆ ನೀಡಿದೆ. ಈಶಾನ್ಯ ಭಾರತದ ಹಲವು ಪ್ರದೇಶಗಳು, ಪಕ್ಕದ ಪೂರ್ವ ಭಾರತ, ಹಿಮಾಲಯದ ತಪ್ಪಲಿನಲ್ಲಿ, ಪೂರ್ವ-ಮಧ್ಯ ಮತ್ತು ದಕ್ಷಿಣ ಪರ್ಯಾಯ ಭಾರತದ ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ದೇಶದ ಉಳಿದ ಭಾಗಗಳ ಬಹುತೇಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆಯಿದೆ.

IMD ಪ್ರಕಾರ, ದಕ್ಷಿಣ ಪೆನಿನ್ಸುಲರ್ ಭಾರತದ ಕೆಲವು ಪ್ರದೇಶಗಳು ಮತ್ತು ಪಶ್ಚಿಮ-ಮಧ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಸಾಧ್ಯತೆಯಿದೆ. ಒಟ್ಟಾರೆಯಾಗಿ 2023ರಲ್ಲಿ ಮಾನ್ಸೂನ್ ಮಳೆಯು “ಸಾಮಾನ್ಯಕ್ಕಿಂತ ಕಡಿಮೆ” ಅಥವಾ “ಸಾಮಾನ್ಯ” ಎಂದು ಅಧಿಕಾರಿಗಳು ಹೇಳಿದ್ದಾರೆ. 90ರಿಂದ 95%ರಷ್ಟು ಆದರೆ “ಸಾಮಾನ್ಯಕ್ಕಿಂತ ಕಡಿಮೆ” ವರ್ಗದಲ್ಲಿ ಪರಿಗಣಿಸಲಾಗುತ್ತದೆ. 90%ಕ್ಕಿಂತ ಕಡಿಮೆ “ಕೊರತೆ” ಎಂದು ಪರಿಗಣಿಸಲಾಗುತ್ತದೆ. 96ರಿಂದ 104%ರ ನಡುವಿನ ಮಾನ್ಸೂನ್ ಮಳೆಯನ್ನು “ಸಾಮಾನ್ಯ” ಎಂದು ಪರಿಗಣಿಸಲಾಗುತ್ತದೆ.

ಎಲ್ ನಿನೋ ನೈಋತ್ಯ ಮಾನ್ಸೂನ್ ಮೇಲೆ ಈ ಬಾರಿ ಬಲವಾದ ಪ್ರಭಾವವನ್ನು ಹೊಂದಿದೆ. ಎಲ್ ನಿನೊ ಪೂರ್ವ ಸಮಭಾಜಕ ಪೆಸಿಫಿಕ್‌ನಲ್ಲಿ ನೀರಿನ ಅಸಾಮಾನ್ಯ ತಾಪಮಾನದಿಂದ ಮೂಡಿದೆ. ಇದು ಭಾರತದಲ್ಲಿ ಬೆಚ್ಚಗಿನ ಬೇಸಿಗೆ ಮತ್ತು ದುರ್ಬಲ ಮಾನ್ಸೂನ್ ಮಳೆಗೆ ಕಾರಣವಾಗಿದೆ.

ಇದನ್ನೂ ಓದಿ: Weather report: ಗಳಿಗೆಗೊಂದು ವಾತಾವರಣ; ಏರಲಿದೆ ತಾಪಮಾನ, ಇರಲಿದೆ ಗುಡುಗು ಮಳೆ

Exit mobile version