ನವದೆಹಲಿ: ದೇಶಾದ್ಯಂತ ಒಂದೆಡೆ ಬಿಸಿಲು(Heat wave) ಮತ್ತೊಂದೆಡೆ ಮಳೆರಾಯನ(Heavy Rain) ಅಬ್ಬರ ಜೋರಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೆಲವು ದಿನಗಳಿಂದ ಮಳೆಯ ಅಬ್ಬರ ಶುರುವಾಗಿದ್ದು, ಉತ್ತರಭಾರತದ ರಾಜ್ಯಗಳಲ್ಲಿ ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ದಾರೆ(Weather Updates). ಉತ್ತರಭಾರತದಲ್ಲಿ ಬುಧವಾರ ಗರಿಷ್ಠ ತಾಪಮಾನ ದಾಖಲೆ ಆಗಿದ್ದು, ಅಧಿಕೃತ ಮಾಹಿತಿ ಪ್ರಕಾರ ದಿಲ್ಲಿ, ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದ ಒಟ್ಟು 24 ಪ್ರದೇಶಗಳಲ್ಲಿ ಬುಧವಾರ 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗಿದೆ.
ರಾಜಸ್ಥಾನದ ಬಾರ್ಮರ್ ಪ್ರದೇಶದಲ್ಲಿ 48 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಏರಿಕೆ ಆಗಿದ್ದು, ಇದು ಈ ಬಾರಿ ಗರಿಷ್ಠ ತಾಪಮಾನ ಆಗಿದೆ. ಮುಂದಿನ ಕೆಲವು ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲೂ ತಾಪಮಾನ ಮೂರರಿಂದ ನಾಲ್ಕು ಡಿಗ್ರಿಯಷ್ಟು ಏರಿಕೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ(IMD) ಎಚ್ಚರಿಸಿದೆ. ಅಲ್ಲದೇ ಬಿಸಿಗಾಳಿಯ ಪ್ರಮಾಣವೂ ಹೆಚ್ಚಾಗಿದ್ದು, ಜನ ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ.
ಕೇರಳದಲ್ಲಿ ಭಾರೀ ಮಳೆ
ಮಧ್ಯ ಮತ್ತು ಉತ್ತರ ಕೇರಳದಾದ್ಯಂತ ಭಾರೀ ಮಳೆಯಾಗಿದ್ದು, 5 ಜಿಲ್ಲೆಗಳಿಗೆ ರೆಡ್ ಅಲರ್ಟ್, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕೇರಳದಲ್ಲಿ ಪೂರ್ವ ಮುಂಗಾರು ಅಬ್ಬರ ಜೋರಾಗಿದ್ದು, ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಚ್ಚಿಯ ಐಟಿ ಟೆಕ್ ಪಾರ್ಕ್ ಜಲಾವೃತ ಗೊಂಡಿದೆ. ಆಫೀಸ್ ಒಳಭಾಗದಲ್ಲಿ ನೀರು ನಿಂತಿದ್ದು, ಪರಿಣಾಮ ಟೆಕ್ಕಿಗಳು ಪರದಾಡಿದ್ದಾರೆ. ಇನ್ನು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಮುಂಭಾಗ ಕೂಡ ಜಲಾವೃತವಾಗಿದೆ. ಅಂಗಡಿಗಳಿಗೂ ನೀರು ನುಗ್ಗಿ ಅಸ್ತವ್ಯಸ್ತವಾಗಿತ್ತು. ಇನ್ನು ಭಾರೀ ಮಳೆಗೆ ಇದುವರೆಗೆ ನಾಲ್ವರು ಬಲಿ ಆಗಿದ್ದಾರೆ.
ಕೇರಳದಲ್ಲಿ ವಿಮಾನ ಸಂಚಾರಕ್ಕೆ ಸ್ಥಗಿತ
ಇನ್ನು ಕೇರಳದಲ್ಲಿ ಭಾರೀ ಮಳೆಯಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಕಲ್ಲಿಕೋಟೆ ವಿಮಾನ ನಿಲ್ದಾಣದಿಂದ ಹೊರಡಬೇಕಾಗಿದ್ದ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ದೋಹಾ, ಮಸ್ಕತ್, ದುಬೈ, ದಾಮನ್ ಮತ್ತು ರಿಯಾಧ್‌ನಿಂದ ಬರುತ್ತಿದ್ದ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಜೆಡ್ಡಾ, ಕುವೈತ್ ಮತ್ತು ದುಬೈಗೆ ಹೋಗುವ ವಿಮಾನಗಳು ವಿಳಂಬವಾಗಿದ್ದರೆ, ದೋಹಾಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ರದ್ದುಗೊಳಿಸಲಾಗಿದೆ.
ಒಡಿಶಾದಲ್ಲಿ ಈ ವಾರ ಭಾರೀ ಮಳೆ
ಇನು ಒಡಿಶಾದಲ್ಲೂ ಈ ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಅಂದಾಜಿಸಿದೆ. ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದ್ದು, ಅದರ ಪ್ರಭಾವದಿಂದ ಉತ್ತರ ಒಡಿಶಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.