ಮುಂಬೈ, ಮಹಾರಾಷ್ಟ್ರ: ನಾಳೆ ನಡೆಯಲಿರುವ ಇಂಡಿಯಾ ಕೂಟ (INDIA Bloc) ಸಭೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ(Mumbai City) ಬುಧವಾರ ಆಗಮಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅವರು, ರಕ್ಷಾ ಬಂಧನದ (Raksha Bandhan) ಹಿನ್ನೆಲೆಯಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ (Bollywood Actor Amitabh Bachchan) ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಅಮಿತಾಭ್ ಬಚ್ಚನ್ ಅವರಿಗೆ ಮಮತಾ ದೀದಿ ಅವರು ರಾಖಿಯನ್ನು ಕಟ್ಟಿದ್ದಾರೆ. ಬಳಿಕ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಅಮಿತಾಭ್ ಬಚ್ಚನ್ ಅವರು ನನಗೆ ಭಾರತ ರತ್ನ (Bharat Ratna) ಇದ್ದಂತೆ ಎಂದು ಹೇಳಿದರು. ಇದಕ್ಕೂ ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಮಮತಾ ಬ್ಯಾನರ್ಜಿ ಅವರುನ್ನು ಉದ್ಧವ್ ಠಾಕ್ರೆ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರು ಸ್ವಾಗತಿಸಿದರು.
ಮಮತಾ ಬ್ಯಾನರ್ಜಿ ಅವರಿಗೆ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಜುಹು ನಿವಾಸದಲ್ಲಿ ಆತ್ಮೀಯ ಸ್ವಾಗತವನ್ನು ನೀಡಿದರು. ಪುತ್ರರಾದ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯ ಕೂಡ ಈ ವೇಳೆ ಹಾಜರಿದ್ದರು. ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳಾದ ನವ್ಯಾ ನವೇಲಿ ನಂದಾ ಅವರನ್ನು ಮಮತಾ ಬ್ಯಾನರ್ಜಿ ಅವರು ಭೇಟಿಯಾದರು.
ಬಚ್ಚನ್ ಕುಟುಂಬದ ಬಗ್ಗೆ ಮಮತಾ ಬ್ಯಾನರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಈ ಕುಟುಂಬವನ್ನು ಪ್ರೀತಿಸುತ್ತೇನೆ. ಅವರು ಭಾರತದ ನಂಬರ್ ಒನ್ ಕುಟುಂಬ ಮತ್ತು ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದುರ್ಗಾ ಪೂಜೆ ಮತ್ತು ಕೋಲ್ಕೊತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಅಮಿತಾಭ್ ಬಚ್ಚನ್ ಅವರಿಗೆ ಇದೇ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಹ್ವಾನ ನೀಡಿದರು.
ಶಾಲೆ ಮಕ್ಕಳ ಜತೆ ರಕ್ಷಾಬಂಧನ ಆಚರಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಸಹೋದರತ್ವ ಸಾರುವ ರಕ್ಷಾಬಂಧನವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಪಾಕಿಸ್ತಾನದ ಮಹಿಳೆಯೊಬ್ಬರು ಮೋದಿ ಅವರಿಗೆ ಪ್ರತಿ ವರ್ಷ ರಾಖಿ ಕಟ್ಟುತ್ತಾರೆ ಇಲ್ಲವೇ ಕಳುಹಿಸುತ್ತಾರೆ. ಈ ಬಾರಿಯೂ ನರೇಂದ್ರ ಮೋದಿ (Narendra Modi) ಅವರು ವಿಶಿಷ್ಟವಾಗಿ ರಕ್ಷಾಬಂಧನವನ್ನು (Raksha Bandhan 2023) ಆಚರಿಸಿದ್ದಾರೆ. ದೆಹಲಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಮೋದಿ ಹಬ್ಬ ಆಚರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Darshan Thoogudeepa: ದರ್ಶನ್‌ಗೆ ರಾಖಿ ಕಟ್ಟಿದಳು ʼರಾಬರ್ಟ್ʼ ಚಿತ್ರದ ನಾಯಕಿ! ಆಕೆ ನೀಡಿದ ಸಂದೇಶವೂ ಮಾರ್ಮಿಕ!
ದೆಹಲಿ ಶಾಲೆಯೊಂದಕ್ಕೆ ತೆರಳಿದ ನರೇಂದ್ರ ಮೋದಿ ರಕ್ಷಾಬಂಧನ ಆಚರಿಸಿದ್ದರು. ಆರೇಳು ವರ್ಷದ ವಿದ್ಯಾರ್ಥಿನಿಯರು ಒಬ್ಬೊಬ್ಬರೇ ಬಂದು ಮೋದಿ ಅವರಿಗೆ ರಾಖಿ ಕಟ್ಟಿದರು. ಮೋದಿ ಅವರೂ ಮಕ್ಕಳೊಂದಿಗೆ ಕಾಲ ಕಳೆಯುವ ಜತೆಗೆ ಅವರ ಹೆಸರು, ಪರಿಚಯ ತಿಳಿದುಕೊಂಡರು. ಮೋದಿ ಅವರಿಗೆ ರಾಖಿ ಕಟ್ಟಿದ ಖುಷಿ ಚಿಣ್ಣರಲ್ಲಿ ಎದ್ದು ಕಾಣುತ್ತಿತ್ತು. ಮೋದಿ ರಕ್ಷಾಬಂಧನ ಆಚರಣೆ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ರಕ್ಷಾಬಂಧನದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ. “ದೇಶದ ಸಂಸ್ಕೃತಿಯಲ್ಲಿ ರಕ್ಷಾಬಂಧನ ಹಬ್ಬಕ್ಕೆ ವಿಶೇಷ ಗೌರವ ಇದೆ. ಸಹೋದರ, ಸಹೋದರಿ ನಡುವೆ ಬಾಂಧವ್ಯ, ಪ್ರೀತಿಯನ್ನು ವೃದ್ಧಿಸುವ ರಕ್ಷಾಬಂಧನವನ್ನು ಆಚರಿಸೋಣ. ದೇಶದ ಜನತೆಗೆ ರಕ್ಷಾಬಂಧನದ ಶುಭಾಶಯಗಳು” ಎಂದು ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.