ಕೋಲ್ಕೊತಾ: ರೈತರು ಎಂದರೆ ಪರಿಶ್ರಮಿಗಳು. ಇಡೀ ದಿನ ಜಮೀನಿನಲ್ಲಿ ಮೈ ಮುರಿದು ಕೆಲಸ ಮಾಡುವವರು, ಆದರೂ, ಸರಿಯಾಗಿ ಬೆಳೆ ಬಾರದೆ, ಬೆಳೆ ಬಂದರೂ ಉತ್ತಮ ಬೆಲೆ ಸಿಗದೆ ಪರದಾಡುವವರು ಎಂದೇ ಎಲ್ಲರೂ ಭಾವಿಸಿದ್ದೇವೆ. ಆದರೆ, ರೈತರೂ ಕನಸುಗಾರರು, ಕಂಡ ಕನಸನ್ನು ನನಸು ಮಾಡುವ ಹಠವಾದಿಗಳು ಎಂಬುದನ್ನು ಪಶ್ಚಿಮ ಬಂಗಾಳದ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ. ಕಷ್ಟಪಟ್ಟು ದುಡಿದು, ವಿಶ್ವವಿಖ್ಯಾತ ಟೈಟಾನಿಕ್ ಹಡಗಿನ ಮಾದರಿಯಲ್ಲಿಯೇ (Titanic House) ಮೂರು ಅಂತಸ್ತಿನ ಮನೆ ಕಟ್ಟಿದ್ದಾರೆ. ಆ ಮೂಲಕ ಮೂರು ದಶಕದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಹೌದು, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನೆಲೆಸಿರುವ ಮಿಂಟು ರಾಯ್ ಎಂಬ ರೈತ, ಕಳೆದ 13 ವರ್ಷಗಳಿಂದ ದುಡಿದ ಹಣವನ್ನೆಲ್ಲ ಮನೆಗೆ ಹಾಕಿ. ಇಟ್ಟಿಗೆ ಇಟ್ಟಿಗೆ ಜೋಡಿಸಿ, ಹಣ ಹೊಂದಿಸಿ ಈಗ ಟೈಟಾನಿಕ್ ಹಡಗಿನ ಮಾದರಿಯಲ್ಲಿಯೇ ಮೂರು ಅಂತಸ್ತಿನ ಮನೆ ನಿರ್ಮಿಸಿದ್ದಾರೆ. ಇದಕ್ಕಾಗಿ ಅವರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದು, 30 ವರ್ಷದ ಹಿಂದಿನ ಕನಸು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ.
ಕನಸು ಹುಟ್ಟಿದ್ದು ಹೇಗೆ?
ಮಿಂಟು ರಾಯ್ ಅವರು ಉತ್ತರ ಪರಗಣ 24 ಜಿಲ್ಲೆಯ ಹೆಲೆಂಚಾ ಮೂಲದವರು. ಒಂದು ದಿನ ದುರ್ಗಾ ಪೆಂಡಾಲ್‌ನಲ್ಲಿ ಟೈಟಾನಿಕ್ ಮಾದರಿಯ ಹಡಗಿನ ಕಲಾಕೃತಿ ನೋಡಿದರು. ಅಲ್ಲಿಂದ ಅವರಿಗೆ ಟೈಟಾನಿಕ್ ಮಾದರಿಯಲ್ಲಿಯೇ ಮನೆ ನಿರ್ಮಿಸುವ ಕನಸು ಟಿಸಿಲೊಡೆಯಿತು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಡಾರ್ಜಿಲಿಂಗ್‌ನ ಫಾನ್ಸಿದೇವಾ ಗ್ರಾಮಕ್ಕೆ ವಲಸೆ ಹೋದರು. ಅಲ್ಲಿಯೇ ಕೃಷಿ ಮಾಡುತ್ತ, ಟೀ ಮಾರುತ್ತ, ಟೀ ಗಾರ್ಡನಿಂಗ್‌ನಲ್ಲಿ ಹೆಚ್ಚು ಸಮಯ ತೊಡಗಿಸುತ್ತ ಹಣ ಹೊಂದಿಸಿದ್ದಾರೆ. ಕಾಸಿಗೆ ಕಾಸು ಕೂಡಿಟ್ಟು, ಮನೆಯ ಎಲ್ಲ ಉಸ್ತುವಾರಿ ವಹಿಸಿಕೊಂಡು, ಎಂಜಿನಿಯರ್‌ಗಳನ್ನು ಸಂಪರ್ಕಿಸಿ ಸುಸಜ್ಜಿತ ಮನೆ ನಿರ್ಮಿಸಿದ್ದಾರೆ.
ಹೀಗಿದೆ ಮನೆ
ನೇಪಾಳಕ್ಕೆ ಹೋಗಿ ತರಬೇತಿ
ಹಡಗಿನ ಮಾದರಿಯಲ್ಲಿಯೇ ಮನೆ ನಿರ್ಮಿಸಲೇಬೇಕು ಎಂಬುದು ಮಿಂಟು ರಾಯ್ ಅವರ ಹಠವಾಗಿತ್ತು. ಇದಕ್ಕಾಗಿ ಅವರು ಎಂಜಿನಿಯರ್‌ಗಳ ಮೊರೆ ಹೋದರು. ಕೆಲ ಎಂಜಿನಿಯರ್‌ಗಳು ದುಬಾರಿ ಮೊತ್ತ ಕೇಳಿದರೆ, ಇನ್ನೂ ಕೆಲವರು ನಿರ್ಲಕ್ಷ್ಯ ಮಾಡಿದರು. ಇಷ್ಟಾದರೂ ಹಠ ಬಿಡದ ಮಿಂಟು ರಾಯ್, ನೇಪಾಳ ಹೋಗಿ, ಮೂರು ವರ್ಷ ಮನೆ ಕಟ್ಟುವುದು, ಕಲ್ಲು ಮುರಿಯುವುದು ಸೇರಿ ಹಲವು ಕೌಶಲಗಳನ್ನು ರೂಢಿಸಿಕೊಂಡು ಬಂದರು. ಬಳಿಕ ಮನೆ ನಿರ್ಮಿಸಿದರು.
“ಟೈಟಾನಿಕ್ ಹಡಗಿನ ಮಾದರಿಯಲ್ಲಿಯೇ ಮನೆ ನಿರ್ಮಿಸುವುದು ನನ್ನ ಏಕಮಾತ್ರ ಉದ್ದೇಶವಾಗಿತ್ತು. ಹಾಗಾಗಿ, ನಾನು 13 ವರ್ಷ ಕಷ್ಟಪಟ್ಟು ಮನೆ ಕಟ್ಟಿದ್ದೇನೆ. ನನ್ನ ಹೆಂಡತಿ, ಇಬ್ಬರು ಮಕ್ಕಳು ಈಗ ಹೊಸ ಮನೆಯಿಂದ ತುಂಬ ಖುಷಿಯಾಗಿದ್ದಾರೆ. ಒಂದೊಂದು ಇಟ್ಟಿಗೆಯನ್ನೂ ಜೋಡಿಸಿ, ಹಣ ಹೊಂದಿಸಿ ಮನೆ ಕಟ್ಟಿದ್ದೇನೆ. 30 ವರ್ಷಗಳ ಕನಸು ತಡವಾಗಿಯಾದರೂ ನನಸಾಗಿದೆ. ಆದರೆ, ನನಸಾದ ಖುಷಿ ಹೆಚ್ಚಿದೆ” ಎಂದು 52 ವರ್ಷದ ಮಿಂಟು ರಾಯ್ ಹೇಳಿದ್ದಾರೆ. ಮನೆಯ ಫೋಟೊಗಳು ವೈರಲ್ ಆಗಿವೆ. ಮಿಂಟು ರಾಯ್ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2023: ದಾದಾ-ವಿರಾಟ್ ಮಧ್ಯೆ ಮೈದಾನದಲ್ಲೇ ನಡೆಯಿತು ಮುಸುಕಿನ ಗುದ್ದಾಟ; ವಿಡಿಯೊ ವೈರಲ್