Site icon Vistara News

West Bengal Governor: ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ; TMC ಆಕ್ರೋಶ

West Bengal Governor

ಕೋಲ್ಕತಾ: ಪಶ್ಚಿಮ ಬಂಗಾಳದ ರಾಜ್ಯಪಾಲ(West Bengal Governor)ರ ವಿರುದ್ಧ ಲೈಂಗಿಕ ಕಿರುಕುಳ(Sexual Harassment)ದ ಆರೋಪ ಕೇಳಿಬಂದಿದೆ. ರಾಜ್ಯಪಾಲ ಸಿ.ವಿ. ಆನಂದ ಬೋಸ್‌(C V Anand Bose) ರಾಜಭವನದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌(TMC) ಮುಖಂಡರು ಆರೋಪಿಸಿದ್ದಾರೆ. ಈ ಸುದ್ದಿ ರಾಜ್ಯಾದ್ಯಂತ ಬಹಳ ಸುದ್ದಿಯಾಗುತ್ತಿದ್ದು, ಇದೊಂದು ತೇಜೋವಧೆ ಮಾಡುವ ಉದ್ದೇಶದಿಂದ ಮಾಡಿರುವ ಆರೋಪ ಎಂದು ಸಿ.ವಿ. ಆನಂದ್‌ ಬೋಸ್‌ ಹೇಳಿದ್ದಾರೆ.

TMC ಆರೋಪ ಏನು?

ಟಿಎಂಸಿ ಮುಖಂಡರ ಆರೋಪದ ಪ್ರಕಾರ, ಮಹಿಳೆಯೊಬ್ಬರು ರಾಜ್ಯಪಾಲ ಆನಂದ ಬೋಸ್‌ ವಿರುದ್ಧ ಕೋಲ್ಕತಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ರಾಜಭವನದಲ್ಲೇ ಲೈಂಗಿಕ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ದಿನೇ ದಿನೇ ರಾಜಭವನದಲ್ಲಿ ಹೆಚ್ಚು ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದೆ ಎಂಬುದನ್ನು ಸಂತ್ರಸ್ತೆ ತನ್ನ ದೂರಿನಲ್ಲಿ ಹೇಳಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಬಗ್ಗೆ ಗಮನ ಹರಿಸಬೇಕಾಗಿದೆ. ನಾರಿಯರಿಗೆ ಗೌರವ ಎಂಬ ಪರಿಕಲ್ಪನೆ ಮೇಲೆ ನಿಜವಾಗಿಯೂ ನಂಬಿಕೆ ಇದ್ದರೆ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು. ಹಾಗೂ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಟಿಎಂಸಿ ತನ್ನ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ.

ಆರೋಪಗಳನ್ನು ತಳ್ಳಿ ಹಾಕಿದ ರಾಜ್ಯಪಾಲ

ರಾಜ್ಯಪಾಲ ಸಿ ವಿ ಆನಂದ್‌ ಬೋಸ್‌ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನ್ ತಳ್ಳಿ ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸತ್ಯ ಎಂದಿಗೂ ಗೆದ್ದೇ ಗೆಲ್ಲುತ್ತದೆ. ಇಂತಹ ಕಟ್ಟು ಕಥೆಗಳನ್ನು ನಿಜ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನನ್ನ ಗೌರವಕ್ಕೆ ಚ್ಯುತಿ ತಂದು ತೇಜೋವಧೆ ಮಾಡುವ ಉದ್ದೇಶದಿಂದ ಟಿಎಂಸಿ ಈ ರೀತಿ ಮಾಡುತ್ತಿದೆ. ಬಂಗಾಳದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಿಲ್ಲಿಸಲು ಇದೊಂದು ಪಿತೂರಿ ಅಷ್ಟೇ. ಆದರೆ ನನ್ನ ಈ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ನನ್ನ‌ ವಿರುದ್ಧ ಆರೋಪ ಮಾಡಿರುವ ಮಹಿಳೆಯರು ಕಾಂಗ್ರೆಸ್‌ನ ಏಜೆಂಟ್‌ಗಳು ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.

ಪೊಲೀಸರು ಹೇಳೋದೇನು?

ಇನ್ನು ಈ ಪ್ರಕರಣದ ಬಗ್ಗೆ ಕೋಲ್ಕತಾ ಪೊಲೀಸ್‌ ಅಧಿಕಾರಿ ಇಂದಿರಾ ಮುಖರ್ಜಿ ಪ್ರತಿಕ್ರಿಯಿಸಿದ್ದು, ಸಂಜೆ 5ಗಂಟೆ ಹೊತ್ತಿಗೆ ನಮಗೆ ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ದೂರು ಬಂದಿತ್ತು. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಘಟನೆ ರಾಜಭವನದ ಒಳಗೆ ನಡೆದಿದೆ. ಅನೇಕ ಬಾರಿ ಈ ರೀತಿ ಕಿರುಕುಳ ಅನುಭವಿಸಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಮಾಹಿತಿ ನೀಡಿದರು.

Exit mobile version