Site icon Vistara News

Jyotipriya Mallick: ಪಡಿತರ ಹಗರಣ; ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಬಂಧನ

Jyotipriya Mallick

West Bengal Minister Jyotipriya Mallick Arrested By ED In Ration Scam

ಕೋಲ್ಕೊತಾ: ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ (Ration Scam) ಪಶ್ಚಿಮ ಬಂಗಾಳ ಅರಣ್ಯ ಸಚಿವ (West Bengal Minister) ಜ್ಯೋತಿಪ್ರಿಯ ಮಲ್ಲಿಕ್‌ (Jyotipriya Mallick) ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ (ಅಕ್ಟೋಬರ್‌ 27) ಬಂಧಿಸಿದ್ದಾರೆ. ಜ್ಯೋತಿಪ್ರಿಯ ಅವರು ಆಹಾರ ಸಚಿವರಾಗಿದ್ದಾಗ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20 ಗಂಟೆ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು, ಶುಕ್ರವಾರ ಬೆಳಗ್ಗೆ 3.23ರ ಸುಮಾರಿಗೆ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಗುರುವಾರವೇ (ಅಕ್ಟೋಬರ್‌ 26) ಜ್ಯೋತಿಪ್ರಿಯ ಹಾಗೂ ಅವರ ಆಪ್ತರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಇದಾದ ಬಳಿಕ ಜ್ಯೋತಿಪ್ರಿಯ ಅವರನ್ನು ಸತತ ವಿಚಾರಣೆ ನಡೆಸಿ, ಬಳಿಕ ಬಂಧಿಸಿದ್ದಾರೆ. ಬಂಧನದ ಬಳಿಕ ಮಾಧ್ಯಮಗಳ ಜತೆ ಮಾತನಾಡಲು ಯತ್ನಿಸಿದ ಜ್ಯೋತಿಪ್ರಿಯ, “ನಾನು ಪಿತೂರಿಗೆ ಬಲಿಯಾಗುತ್ತಿರುವ ಸಂತ್ರಸ್ತ” ಎಂದು ಹೇಳಿದ್ದಾರೆ.

ಜ್ಯೋತಿಪ್ರಿಯ ಅವರು ಆಹಾರ ಸಚಿವರಾಗಿದ್ದಾಗ ಸಾರ್ವಜನಿಕರಿಗೆ ಪಡಿತರ ವಿತರಣೆ ವೇಳೆ ಭಾರಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಕಳೆದ ಒಂದು ವರ್ಷದಿಂದ ಬಿಜೆಪಿ ನಾಯಕರು ಇದೇ ಆರೋಪ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಈಗನ ಆಹಾರ ಸಚಿವರ ಮನೆ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇನ್ನು ಜ್ಯೋತಿಪ್ರಿಯ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಲೇ, “ಜ್ಯೋತಿಪ್ರಿಯ ಅವರಿಗೆ ಏನಾದರೂ ಆದರೆ, ಬಿಜೆಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆಕೊಟ್ಟ ಕಾಂಗ್ರೆಸ್​ ಮಾಜಿ ಸಚಿವ ಬಂಧನ

ಕೆಲ ತಿಂಗಳ ಹಿಂದಷ್ಟೇ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡು ವಿದ್ಯುತ್​ ಮತ್ತು ಅಬಕಾರಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ರಾಜ್ಯದಲ್ಲಿನ ಯಾವುದೇ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ತಮಿಳುನಾಡು ಸರ್ಕಾರ ನೀಡಿದ್ದ ಸಾಮಾನ್ಯ ಒಪ್ಪಿಗೆ (General Consent)ಯನ್ನು ಹಿಂಪಡೆದಿತ್ತು. ಕೇಂದ್ರ ಸರ್ಕಾರವು ಪ್ರತಿಪಕ್ಷಗಳನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಹಲವು ವರ್ಷಗಳಿಂದ ಆರೋಪಿಸುತ್ತಲೇ ಇವೆ.

Exit mobile version