ಕೋಲ್ಕೊತಾ, ಪಶ್ಚಿಮ ಬಂಗಾಳ: ಗ್ರಾಮೀಣ ಸ್ಥಳೀಯ ಪಂಚಾಯ್ತಿ ಚುನಾವಣೆಯಲ್ಲಿ (West Bengal Rural Poll Results) ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (Trinamool Congress – TMC)) ಭರ್ಜರಿ ಜಯ ಸಾಧಿಸಿದೆ. ಬುಧವಾರ ಸಂಜೆ 4.30ರವರೆಗಿನ ವರದಿಗಳ ಪ್ರಕಾರ, 63,229 ಒಟ್ಟು ಸೀಟುಗಳ ಪೈಕಿ ತೃಣಮೂಲ ಕಾಂಗ್ರೆಸ್ ಒಟ್ಟು 34,901 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಭಾರತೀಯ ಜನತಾ ಪಾರ್ಟಿ (BJP) 9,719 ಕ್ಷೇತ್ರಗಳು, ಎಡ ಪಕ್ಷಗಳು (Left Parties) 3,083 ಹಾಗೂ ಕಾಂಗ್ರೆಸ್ ಪಕ್ಷವು (Congress Party) 2,542 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂರೂ ಪಕ್ಷಗಳು ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಫಲಿತಾಂಶ ಪೂರ್ತಿ ಹೊರ ಬಿದ್ದ ಬಳಿಕ, ಅಂಕಿಸಂಖ್ಯೆಗಳಲ್ಲಿ ವ್ಯತ್ಯಾಸವಾಗಬಹುಹು. ಆದರೆ, ಈ ಮಧ್ಯೆ ಕಲ್ಕತ್ತಾ ಹೈಕೋರ್ಟ್ (Calcutta High Court) ಆದೇಶದ ಪ್ರಕಾರ, ಪಶ್ಚಿಮ ಬಂಗಾಳ ಪಂಚಾಯ್ತಿ ಎಲೆಕ್ಷನ್ ಹಾಗೂ ಫಲಿತಾಂಶವು ಅದರ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಮತದಾನದ ದಿನ ನಡೆದ ಹಿಂಸಾಚಾರ ಕುರಿತು ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಕಲ್ಕತ್ತಾ ಹೈಕೋರ್ಟ್, ಫಲಿತಾಂಶವು ತನ್ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.
ಮತದಾನದ ವೇಳೆ ನಡೆದ ಹಿಂಸಾಚಾರ ಮತ್ತು ಅಕ್ರಮಗಳ ಆರೋಪಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಟ್, ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಹಾಗೂ ಒಕ್ಕೂಟ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪಶ್ಚಿಮ ಬಂಗಾಳ ಪಂಚಾಯ್ತಿ ಚುನಾವಣೆ ಮತ್ತು ಫಲಿತಾಂಶವು ಈಗ ಕೋರ್ಟ್ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ, ಚುನಾವಣೆಗಳನ್ನು ನಡೆಸುವುದು ಮತ್ತು ಫಲಿತಾಂಶವನ್ನು ಪ್ರಕಟಿಸುವುದು ಈ ರಿಟ್ ಅರ್ಜಿಯಲ್ಲಿ ಅಂಗೀಕರಿಸಬಹುದಾದ ಅಂತಿಮ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ಚುನಾವಣೆಯಲ್ಲಿ ಗೆದ್ದಿದ್ದಾರೆಂದು ಘೋಷಣೆ ಮಾಡಲಾಗಿರುವ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವಂತೆ ಹೈಕೋರ್ಟ್, ರಾಜ್ಯ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿಜಯದ ಓಟ; ತಡರಾತ್ರಿ ಮತ್ತೆ ಗಲಾಟೆ, ಒಬ್ಬನ ಸಾವು
ಜುಲೈ 8 ರಂದು ನಡೆದ ಪಂಚಾಯತ್ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಚುನಾವಣಾ ದುರುಪಯೋಗ ನಡೆದಿದೆ ಎಂದು ಆರೋಪಿಸಲಾಗಿತ್ತು. ಹಾಗಾಗಿಸುಮಾರು 50,000 ಬೂತ್‌ಗಳಲ್ಲಿ ಮರು ಮತದಾನ ನಡೆಸಲು ಎಸ್‌ಇಸಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 696 ಬೂತ್‌ಗಳಲ್ಲಿ ಮರು ಮತದಾನ ನಡೆದಿದ್ದು, ಜುಲೈ 11ರಂದು ಮತ ಎಣಿಕೆ ಆರಂಭವಾಗಿತ್ತು. ಇನ್ನು ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಬೇಕಿದೆ.