ಕೋಲ್ಕೊತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ (Sandeshkhali Case) ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಭೂಮಿಯ ಅತಿಕ್ರಮಣ ಸೇರಿ ಹಲವು ಪ್ರಕರಣಗಲ್ಲಿ ಬಂಧಿತನಾಗಿರುವ ಟಿಎಂಸಿಯ ಉಚ್ಚಾಟಿತ ನಾಯಕ ಶಹಜಹಾನ್ ಶೇಖ್‌ನನ್ನು (Shahjahan Sheikh) ಸಿಬಿಐಗೆ ವಹಿಸಲು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ನಿರಾಕರಿಸಿದೆ. ಅಷ್ಟೇ ಅಲ್ಲ, ಕೋಲ್ಕೊತಾ ಹೈಕೋರ್ಟ್ (Calcutta High Court) ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಏತನ್ಮಧ್ಯೆಯೇ, ಶಹಜಹಾನ್ ಶೇಖ್‌ನ 12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಶಹಜಹಾನ್ ಶೇಖ್‌ನನ್ನು ಮಂಗಳವಾರ (ಮಾರ್ಚ್ 5) ಸಂಜೆ 4.30ರೊಳಗೆ ಸಿಬಿಐ ಕಸ್ಟಡಿಗೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್‌ಗೆ (CID) ಕೋಲ್ಕೊತಾ ಹೈಕೋರ್ಟ್ ಆದೇಶಿಸಿತ್ತು. ಹಾಗಾಗಿ, ಸಿಬಿಐ ಅಧಿಕಾರಿಗಳು ಬುಧವಾರ ಸಂಜೆ ಬಂಗಾಳ ಪೊಲೀಸ್ ಕೇಂದ್ರ ಕಚೇರಿಗೆ ತೆರಳಿದ್ದರು. ಆದರೆ, ಸಂಜೆ 7.30 ಆದರೂ ಶಹಜಹಾನ್ ಶೇಖ್‌ನನ್ನು ತಮ್ಮ ವಶಕ್ಕೆ ನೀಡದ ಕಾರಣ ಸಿಬಿಐ ಅಧಿಕಾರಿಗಳು ವಾಪಸಾದರು. ಸುಪ್ರೀಂ ಕೋರ್ಟ್ ಆದೇಶದವರೆಗೆ ಶಹಜಹಾನ್‌ನನ್ನು ಸಿಬಿಐ ವಶಕ್ಕೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
#WATCH | CBI team left from police headquarters in Kolkata. West Bengal CID did not hand over custody of Sheikh Shahjahan to CBI as the state government went to the Supreme Court regarding this matter. pic.twitter.com/sAJeWoihYK
— ANI (@ANI) March 5, 2024
12 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಶಹಜಹಾನ್ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್, ಬ್ಯಾಂಕ್ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಇದರಿಂದಾಗಿ ಶಹಜಹಾನ್ ಶೇಖ್‌ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಸಂದೇಶ್‌ಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಜಾಗ ಅತಿಕ್ರಮಣ, ಹಿಂಸಾಚಾರ ಸೇರಿ ಹಲವು ಪ್ರಕರಣಗಳು ಬೆಳಕಿಗೆ ಬಂದು, ಶಹಜಹಾನ್ ಶೇಖ್ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಂಡಿದೆ. ಇದಾದ ಬಳಿಕ, ಶಹಜಹಾನ್ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್ ಆದೇಶ ನೀಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಶಹಜಹಾನ್ ಶೇಖ್ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್ ಆಗಿ ಹೇಳಿತ್ತು. ಇ.ಡಿ ಅಧಿಕಾರಿಗಳ ದಾಳಿ ಸೇರಿ ಎಲ್ಲ ಪ್ರಕರಣಗಳು, ಅವುಗಳ ದಾಖಲೆಯನ್ನು ಸಿಬಿಐಗೆ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ; ಟಿಎಂಸಿಯ ಶಹಜಹಾನ್‌ನನ್ನು ಸಿಬಿಐಗೆ ವಹಿಸಿ ಎಂದು ಕೋರ್ಟ್ ಆದೇಶ
ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯು ಫೆಬ್ರವರಿ 14ರಿಂದಲೂ ಹಿಂಸಾಚಾರದಲ್ಲಿ ಮುಳುಗಿದೆ. ತೃಣಮೂಲ ನಾಯಕ ಶಹಜಹಾನ್‌ನ ಇಬ್ಬರು ನಿಕಟ ಸಹಚರರು ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿದ್ದಾರೆ. ಇದೇ ಪ್ರದೇಶದಲ್ಲಿರುವ ಶಹಜಹಾನ್ ಮನೆಗೆ ಜನವರಿ 5ರಂದು ಇ.ಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಆಗ, ಇ.ಡಿ ಅಧಿಕಾರಿಗಳ ಮೇಲೂ ಶಹಜಹಾನ್ ಕಡೆಯವರು ದಾಳಿ ನಡೆಸಿದ್ದರು. ಕಲ್ಲುತೂರಾಟ ಕೂಡ ನಡೆಸಿದ್ದರು. ಇದಾದ ಬಳಿಕ ಶಹಜಹಾನ್ ಶೇಖ್ ನಾಪತ್ರೆಯಾಗಿದ್ದ. ಫೆಬ್ರವರಿ 29ರಂದು ಆತನನ್ನು ಬಂಧಿಸಿದ್ದಾರೆ. ಸಂದೇಶ್‌ಖಾಲಿಯಲ್ಲಿ ಶಹಜಹಾನ್ ಶೇಖ್ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಭೂಮಿಯ ಅತಿಕ್ರಮಣ, ಹಿಂಸೆಗೆ ಪ್ರಚೋದನೆ, ಇ.ಡಿ. ಅಧಿಕಾರಿಗಳ ಮೇಲೆ ದಾಳಿ ಸೇರಿ ಹಲವು ಪ್ರಕರಣ ಎದುರಿಸುತ್ತಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ