Site icon Vistara News

Ration Scam: ಪಡಿತರ ಹಗರಣ; ಟಿಎಂಸಿಯ ಮತ್ತೊಬ್ಬ ನಾಯಕ ಶಂಕರ್‌ ಆಧ್ಯಾ ಬಂಧನ

Shankar Adhya

West Bengal: Trinamool Congress leader Shankar Adhya arrested by ED in ration scam case

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಪಡಿತರ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರ (Ration Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (E.D) ಟಿಎಂಸಿಯ ಮತ್ತೊಬ್ಬ ಮುಖಂಡನನ್ನು ಬಂಧಿಸಿದ್ದಾರೆ. ಪಡಿತರ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಬೋಂಗಾವ್‌ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್‌ ಆಧ್ಯಾ (Shankar Adhya) ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಅವರನ್ನು ಸೇರಿ ಹಲವು ನಾಯಕರನ್ನು ಬಂಧಿಸಲಾಗಿದೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಶುಕ್ರವಾರವೇ (ಜನವರಿ 5) ಇ.ಡಿ ಅಧಿಕಾರಿಗಳು ಹಲವೆಡೆ ದಾಳಿ ಆರಂಭಿಸಿದ್ದಾರೆ. ಇದೇ ವೇಳೆ ಶಂಕರ್‌ ಆಧ್ಯಾ ಅವರ ಮನೆಯ ಮೇಲೂ ದಾಳಿ ನಡೆಸಿದ್ದ ಅವರು ಸತತ ಪರಿಶೀಲನೆ ಬಳಿಕ ಬಂಧಿಸಿದ್ದಾರೆ. ಶಂಕರ್‌ ಆಧ್ಯಾ ಅವರ ಬಂಧನದ ವೇಳೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ಕುರಿತು ಮಾತನಾಡಿದ ಶಂಕರ್‌ ಆಧ್ಯಾ ಅವರ ಪತ್ನಿ, “ನನ್ನ ಪತಿಯು ತನಿಖೆಗೆ ಸಹಕಾರ ನೀಡಿದ್ದಾರೆ. ಆದರೂ ಅವರನ್ನು ಬಂಧಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇ.ಡಿ ಅಧಿಕಾರಿಗಳ ಮೇಲೆಯೇ ದಾಳಿ

ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶುಕ್ರವಾರ (ಜನವರಿ 5) ದಾಳಿ ನಡೆಸುವ ವೇಳೆ 200ಕ್ಕೂ ಅಧಿಕ ಜನ ಇ.ಡಿ ಅಧಿಕಾರಿಗಳ ವಾಹನಗಳ ಮೇಲೆಯೇ ದಾಳಿ ನಡೆಸಿದ್ದರು. ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ಪರಿಣಾಮ ವಾಹನಗಳ ಗಾಜು ಪುಡಿಯಾಗಿದ್ದಲ್ಲದೆ ಕೆಲ ಅಧಿಕಾರಿಗಳು ಗಾಯಗೊಂಡಿದ್ದರು. ಇಷ್ಟಾದರೂ, ಇ.ಡಿ ಅಧಿಕಾರಿಗಳು ಟಿಎಂಸಿ ಮುಖಂಡ ಶಹಜಹಾನ್ ಶೇಖ್‌‌ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೊಬ್ಬ ನಾಯಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Congress MLA: ಕಾಂಗ್ರೆಸ್‌ ಶಾಸಕನಿಗೆ ಇ.ಡಿ ಶಾಕ್;‌ 5 ಕೋಟಿ ರೂ. ಜಪ್ತಿ, ಶಸ್ತ್ರಾಸ್ತ್ರ ವಶ

ಪಶ್ಚಿಮ ಬಂಗಾಳದಲ್ಲಿ ಪಡಿತರ ಹಂಚಿಕೆ ಹಗರಣವು ಭಾರಿ ಸುದ್ದಿಯಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಅವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಬಂಧಿಸಲಾಗಿದೆ. ಜ್ಯೋತಿಪ್ರಿಯ ಅವರು ಆಹಾರ ಸಚಿವರಾಗಿದ್ದಾಗ ಸಾರ್ವಜನಿಕರಿಗೆ ಪಡಿತರ ವಿತರಣೆ ವೇಳೆ ಭಾರಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಕಳೆದ ಒಂದು ವರ್ಷದಿಂದ ಬಿಜೆಪಿ ನಾಯಕರು ಇದೇ ಆರೋಪ ಮಾಡುತ್ತಿದ್ದರು.

ಕೆಲ ದಿನಗಳ ಹಿಂದಷ್ಟೇ ಈಗಿನ ಆಹಾರ ಸಚಿವರ ಮನೆ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇನ್ನು ಜ್ಯೋತಿಪ್ರಿಯ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಲೇ, “ಜ್ಯೋತಿಪ್ರಿಯ ಅವರಿಗೆ ಏನಾದರೂ ಆದರೆ, ಬಿಜೆಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರದಲ್ಲಿ ಶೇ.30ರಷ್ಟು ಪಡಿತರವನ್ನು ಮುಕ್ತ ಮಾರುಕಟ್ಟೆಗೆ ಸಾಗಿಸಲಾಗಿದೆ ಎಂಬುದು ಇ.ಡಿ ಆರೋಪವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version