ಚಂಡೀಗಢ: ಖಲಿಸ್ತಾನಿಗಳ ಪರ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕಾಗಿ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆತನನ್ನು ಬಂಧಿಸಲು ರಾಜ್ಯದ ಪೊಲೀಸರು ಹರಸಾಹಸಪಡುತ್ತಿದ್ದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಆತನ ಆಪ್ತರ ಬಂಧನ, ಕಾರು ವಶ, ಶಸ್ತ್ರಾಸ್ತ್ರಗಳ ಜಪ್ತಿ ಮಾತ್ರ ಸಾಧ್ಯವಾಗಿದೆ. ಇನ್ನು ಬಂಧನ ಕಾರ್ಯಾಚರಣೆ ಕುರಿತು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದೆ.
ಅಮೃತ್‌ಪಾಲ್ ಸಿಂಗ್‌ನನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಆತನನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ವಾರಿಸ್ ದೇ ಪಂಜಾಬ್ ಮುಖ್ಯಸ್ಥನ ಕಾನೂನು ಸಲಹೆಗಾರ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದಾರೆ. ಇದೇ ಪ್ರಕರಣದ ಅರ್ಜಿಯ ವಿಚಾರಣೆ ವೇಳೆ, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಮೂರ್ತಿ ಎನ್.ಎಸ್.ಶೇಖಾವತ್ ನೇತೃತ್ವದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಇದು ಸಂಪೂರ್ಣ ಗುಪ್ತಚರ ವೈಫಲ್ಯ ಎಂದು ಜರಿದಿದೆ.
ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ವಿನೋದ್ ಘಾಯ್ ಅವರು ರಾಜ್ಯ ಸರ್ಕಾರದ ಕ್ರಮಗಳ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದರು. “ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಿಲ್ಲ. ಆತ ಪೊಲೀಸ್ ಕಸ್ಟಡಿಯಲ್ಲಿ ಇಲ್ಲ. ಇದುವರೆಗೆ ಆತನ 120 ಆಪ್ತರನ್ನು ಬಂಧಿಸಲಾಗಿದೆ. ಅವನ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಆದಾಗ್ಯೂ, ಕೋರ್ಟ್‌ನಲ್ಲಿ ಮುಕ್ತವಾಗಿ ಒಂದಷ್ಟು ಅಂಶಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ” ಎಂದರು.
ಆಗ ನ್ಯಾಯಾಲಯವು, “ಅಮೃತ್‌ಪಾಲ್ ಸಿಂಗ್ ವಿರುದ್ಧ 5-6 ಎಫ್‌ಐಆರ್ ದಾಖಲಾಗಿದೆ ಎಂದು ಹೇಳುತ್ತಿದ್ದೀರಿ. ಆತನ ವಿರುದ್ಧ 5-6 ಕ್ರಿಮಿನಲ್ ಕೇಸ್ ದಾಖಲಿಸಿದ್ದೀರಿ. ಜಿ-20 ಸಭೆಯ ಹಿನ್ನೆಲೆಯಲ್ಲಿ ಅಷ್ಟೊಂದು ಬಿಗಿ ಭದ್ರತೆ ಇದ್ದರೂ ಅಮೃತ್‌ಪಾಲ್ ಸಿಂಗ್ ಪರಾರಿಯಾಗಲು ಹೇಗೆ ಸಾಧ್ಯ? ಇದುವರೆಗೆ ಅಮೃತ್‌ಪಾಲ್ ಹೊರತಾಗಿ ಆತನ 120 ಆಪ್ತರನ್ನು ಬಂಧಿಸಿದ್ದೀರಿ. ಅಷ್ಟಕ್ಕೂ ರಾಜ್ಯದಲ್ಲಿರುವ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿತು. ಆದಾಗ್ಯೂ, ರಾಜ್ಯ ಸರ್ಕಾರದ ಹಿತಕ್ಕೆ ಧಕ್ಕೆ ತರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ʼವಾರಿಸ್ ಪಂಜಾಬ್ ದೇʼ ಸಂಘಟನೆಯ ನಾಯಕನಾಗಿದ್ದ ಅಮೃತ್‌ಪಾಲ್, ಆನಂದ್‌ಪುರ್ ಖಾಲ್ಸಾ ಫೋರ್ಸ್ (AKF) ಎಂಬ ಹೆಸರಿನ ತನ್ನದೇ ಸೈನ್ಯವನ್ನು ಕಟ್ಟಲು ಯತ್ನಿಸಿದ್ದ. ಇದು ಖಲಿಸ್ತಾನಿ ಟೈಗರ್ ಫೋರ್ಸ್ (KTF) ಎಂಬ ಈ ಹಿಂದಿನ ಉಗ್ರ ಸಂಘಟನೆಯ ರೀತಿಯಲ್ಲಿತ್ತು. ಜತೆಗೆ ಒಂದು ಮಾನವ ಬಾಂಬ್ ಸ್ಕ್ವಾಡ್ ಅನ್ನೂ ಸಿದ್ಧಪಡಿಸುತ್ತಿದ್ದ ಎಂದು ತಿಳಿದುಬಂದಿದೆ. ಅಮೃತ್‌ಪಾಲ್ ಸಿಂಗ್ ಮಾದಕದ್ರವ್ಯ ವ್ಯಸನ ತಡೆ ಶಿಬಿರಗಳನ್ನು ಹಾಗೂ ಗುರುದ್ವಾರಗಳನ್ನು ತನ್ನ ಆಯುಧ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಆತ್ಮಹತ್ಯಾ ಬಾಂಬ್ ದಾಳಿಗೆ ಯುವಕರನ್ನು ಸಿದ್ಧಗೊಳಿಸುತ್ತಿದ್ದಾನೆ ಎಂದು ಮಾಹಿತಿಯನ್ನು ಬೇಹುಗಾರಿಕೆ ಸಂಸ್ಥೆಗಳು ನೀಡಿವೆ.
ಇದನ್ನೂ ಓದಿ: Amritpal Singh: ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಬಳಿ ಸ್ವಂತ ಮಿಲಿಟರಿ, ಬಾಂಬ್ ಸ್ಕ್ವಾಡ್!