ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಆಮ್ ಆದ್ಮಿ ಪಕ್ಷದ ಬಗೆಗೆ ಸಾಕಷ್ಟು ಸುದ್ದಿಗಳು ಬರುತ್ತಿವೆ. ಆದರೆ ಇತ್ತೀಚಿನವರೆಗೂ ಕಾಂಗ್ರೆಸ್‌ನ ಚುರುಕಾಗಿದೆ ಎನ್ನಲು ಸಾಕ್ಷಿಗಳಿರಲಿಲ್ಲ. ಹೀಗಾಗಿ, ಆಪ್ ಮುಂದೆ ತನ್ನ ನೆಲೆಯನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆಯನ್ನೇ ವಿಶ್ಲೇಷಿಸಲಾಗುತ್ತಿತ್ತು.
ಆದರೆ ಕಾಂಗ್ರೆಸ್ ಇದ್ದಕ್ಕಿದ್ದಂತೆ ಚುರುಕಾಗಿದೆ. ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪ್ರಚಾರ ರಂಗೇರಿದೆ. ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಉಳಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಸಫಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ 2017ರ ಸಾಧನೆಯನ್ನು ಮಾಡುವುದು ಕಷ್ಟ ಎಂದೂ ಹೇಳಲಾಗುತ್ತಿದೆ.
ಈ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಯಾಕೆ ಕಡೆಗಣಿಸಲಾಗದು ಎಂಬುದಕ್ಕೆ ಕೆಲವು ಕಾರಣಗಳಿವೆ. ಕಾಂಗ್ರೆಸ್‌ನ ಅನಿರೀಕ್ಷಿತ ಸಾಧನೆ ಅಥವಾ ಪತನಕ್ಕೆ ಕಾರಣವಾಗಬಹುದಾದ ತಲಾ ಮೂರು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಇಲ್ಲಿ ಗಮನಿಸೋಣ.
3 ಧನಾತ್ಮಕ ಅಂಶಗಳು
ಕಾಂಗ್ರೆಸ್‌ನ ಈ ಚುರುಕುತನ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರುವುದೇನಲ್ಲ. 2007ರ ಹಾಗೂ 2012ರ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ನೆಲಕಚ್ಚಿತು, ಇನ್ನು ಎದ್ದೇಳಲಾರದು ಎಂದೇ ಭಾವಿಸಲಾಗಿತ್ತು. ಆದರೆ ಆ ಚುನಾವಣೆಗಳಲ್ಲೂ ಒಂದು ಮಟ್ಟಿನ ಸಾಧನೆ ತೋರಿಸಿದೆ. ನಾಯಕತ್ವದ ಕೊರತೆ, ಪಕ್ಷಾಂತರದ ಹಾವಳಿ ಇತ್ಯಾದಿ ಸಮಸ್ಯೆಗಳಿದ್ದಾಗ್ಯೂ ತನ್ನ ಸಂಘಟನೆಯ ಮೂಲ ತಳಹದಿಯನ್ನು ಅದು ಬಿಟ್ಟುಕೊಟ್ಟಿರಲಿಲ್ಲ. ಹಾಗೆಯೇ ಈಗಲೂ ಅದು ವಿಸ್ತರಣೆಯ ಆಕಾಂಕ್ಷೆ ಇಲ್ಲದಿದ್ದರೂ ತನ್ನ ತಳಹದಿಯನ್ನು ಕಾಪಾಡಿಕೊಳ್ಳಲಿದೆ. ಇಲ್ಲಿ ಗಮನಿಸಬೇಕಾದ ಅಂಶಗಳು ಹೀಗಿವೆ-
ಮತದ ಪ್ರಮಾಣ: ನರೇಂದ್ರ ಮೋದಿ ಅವರ ಮುಖ್ಯಮಂತ್ರಿತ್ವದ ಜನಪ್ರಿಯ ಅವಧಿಯಲ್ಲಿ ಕೂಡ, ಇಲ್ಲಿ ಕಾಂಗ್ರೆಸ್‌ನ ಮತಗಳಿಕೆಯ ಪ್ರಮಾಣ ಶೇ.38 ಹಾಗೂ ಅದಕ್ಕಿಂತ ಹೆಚ್ಚಿತ್ತು. ಇದುವರೆಗಿನ ಯಾವುದೇ ವಿಧಾನಸಬೆ ಚುನಾವಣೆಯಲ್ಲೂ ಅದರ ಮತಹಂಚಿಕೆ ಶೇ.30ಕ್ಕಿಂತ ಕೆಳಗೆ ಇಳಿದೇ ಇಲ್ಲ. ಆದರೆ ಇದುವರೆಗೂ ಚುನಾವಣೆಗಳಲ್ಲಿ ಸ್ಪರ್ಧೆ ದ್ವಿಪಕ್ಷೀಯವಾಗಿತ್ತು. ಇದೀಗ ಹೊಸದಾಗಿ ಕಾಣಿಸಿಕೊಂಡಿರುವ ಆಪ್ ಹಾಗೂ ಎಐಎಂಐಎಂಗಳ ಅಪಾಯ ಏನೆಂಬುದನ್ನು ಕಾದು ನೋಡಬೇಕಿದೆ.
ಕ್ಷೇತ್ರಗಳು: ಕಳೆದ ಎರಡು ದಶಕಗಳಲ್ಲಿ ಡಜನ್‌ನಷ್ಟು ವಿಧಾನಸಭೆ ಕ್ಷೇತ್ರಗಳು ಕಾಂಗ್ರೆಸ್‌ನ ಕೈ ತಪ್ಪಿಯೇ ಇಲ್ಲ. ಖೇಡ್‌ಬ್ರಹ್ಮ, ದಾರಿಯಾಪುರ್, ಜಮಾಲ್‌ಪುರ್- ಖಾಡಿಯಾ, ಜಸ್ದಾನ್, ಬೊರ್ಸಾದ್, ಮಹುಧಾ, ವ್ಯಾರಾ, ದಾಂತಾ, ಕಪ್ರದಾ, ವನ್ಸ್‌ದಾ, ಭಿಲೋಡಾ, ವಡಗಾಂವ್‌ನಂಥ ಸ್ಥಾನಗಳು ಕೈಯ ಕೈಯಲ್ಲೇ ಇವೆ. ಇವು ಕಾಂಗ್ರೆಸ್‌ನ ಭದ್ರ ನೆಲೆ. ಇತ್ತೀಚೆಗೆ ಇಲ್ಲಿ ಸ್ವಲ್ಪ ಮಟ್ಟಿಗೆ ಆಪ್, ಎಐಎಂಐಎಂ, ಬಿಟಿಪಿಗಳ ಸ್ಪರ್ಧೆ ತಲೆದೋರಿದೆ.
ಕೆಲವೆಡೆ ಬುಡ ಗಟ್ಟಿ: ನಿರ್ದಿಷ್ಟವಾಗಿ, ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಕಾಂಗ್ರೆಸ್‌ನ ನೆಲೆ ಗಟ್ಟಿಯಾಗಿದೆ. ಬುಡಕಟ್ಟು ಸಮುದಾಯದವರು ಕಡಿಮೆಯಿರುವ ಕೆಲವು ಗ್ರಾಮೀಣ ಪ್ರದೇಶಗಳಲ್ಲೂ ಇದೆ. ಉತ್ತರ ಗುಜರಾತು ಮತ್ತು ಸೌರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ಇದೆ. ಮೇಲೆ ಉಲ್ಲೇಖಿಸಿದ ಕ್ಷೇತ್ರಗಳಲ್ಲಿ ಜಮಾಲ್‌ಪುರ ಖಾಡಿಯಾ, ದಾರಿಯಾಪುರಗಳಂಥ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹೊರತುಪಡಿಸಿದರೆ ಉಳೆದೆಲ್ಲವುಗಳೂ ಗ್ರಾಮೀಣ ವ್ಯಾಪಕತೆ ಹೊಂದಿವೆ.
ದಲಿತ ಮತದಾರರ ನಡುವೆ ಕಾಂಗ್ರೆಸ್ ಸ್ಥಿರ ಮತಬ್ಯಾಂಕ್ ಹೊಂದಿದೆ. 2019ರಲ್ಲೂ ಕಾಂಗ್ರೆಸ್‌ನ್ನು ಬೆಂಬಲಿಸಿದ ಕೆಲವು ಸಮುದಾಯಗಳಲ್ಲಿ ಇದು ಪ್ರಮುಖ. ಆಗ ಆದಿವಾಸಿಗಳ ಬೆಂಬಲ ಕಳೆದುಕೊಂಡಿತ್ತು. 2017ರಿಂದ 2019ರ ನಡುವೆ ದಲಿತರ ಒಲವು ಕಾಂಗ್ರೆಸ್ ಕಡೆಗೆ ಹೆಚ್ಚಿತ್ತು. ಆದರೆ ದಲಿತರು ಗುಜರಾತ್‌ನ ಜನಸಂಖ್ಯೆಯಲ್ಲಿ ಶೇ.10ರಷ್ಟು ಮಾತ್ರ ಇರುವುದು. ಬಿಜೆಪಿಯ ಪ್ರಭಾವ ಆದಿವಾಸಿಗಳಲ್ಲಿ ಹಾಗೂ ಒಬಿಸಿಗಳಲ್ಲಿ ಹೆಚ್ಚಿದೆ.
3 ಋಣಾತ್ಮಕ ಅಂಶಗಳು
2017ರ ಮಾದರಿಯ ಅಲೆಯ ಕೊರತೆ: ಬಿಜೆಪಿಯ ಆಡಳಿತದ ವಿರೋಧಿ ಅಲೆ ಇಂದು ತುಸುಮಟ್ಟಿಗೆ ಇದೆ. ಆದರೆ 2017ರ ಚುನಾವಣೆಯ ಸಮಯದಲ್ಲಿದ್ದ, ಮೂರು ಚಳವಳಿಗಳಿಂದ ಉಂಟಾಗಿದ್ದ ಅಲೆ ಈ ಬಾರಿ ಇಲ್ಲ. ಈ ಚಳವಳಿಗಳೆಂದರೆ ಪಾಟಿದಾರ ಅನಾಮತ್ ಆಂದೋಲನ, ಮೀಸಲು ಕೋಟಾ ಬದಲಾವಣೆ ವಿರುದ್ಧ ಒಬಿಸಿ ಪ್ರತಿಭಟನೆ, ಉನಾ ಘಟನೆಯ ಕುರಿತು ದಲಿತರ ಪ್ರತಿಭಟನೆ. ಇವೆಲ್ಲವೂ ಬಿಜೆಪಿ ಆಡಳಿತದ ವಿರುದ್ಧ ಜಾತಿ ಮೂಲದ ಆಕ್ರೋಶಗಳಿಂದ ಉಂಟಾಗಿದ್ದು, ಕಾಂಗ್ರೆಸ್‌ನ ಪರವಾಗಿ ಕೆಲಸ ಮಾಡಿದ್ದವು.
ಅಂದು ಮಾಲ್‌ಧಾರಿ ಸಮುದಾಯದ ಮಹಾಪಂಚಾಯತ್, ಬಿಜೆಪಿ ವಿರುದ್ಧ ಹಾಗೂ ಕಾಂಗ್ರೆಸ್ ಪರವಾಗಿ ಹೇಳಿಕೆಯನ್ನೇ ಹೊರಡಿಸಿತ್ತು. ಅಂಥ ಯಾವುದೇ ಬೆಳವಣಿಗೆ ಈ ಬಾರಿ ಇಲ್ಲ. 2017ರಲ್ಲಿ ಆಗ ಬಿಸಿಬಿಸಿಯಾಗಿದ್ದ ಡಿಮಾನಿಟೈಸೇಷನ್ ಹಾಗೂ ಜಿಎಸ್‌ಟಿ ಅಳವಡಿಕೆಯ ಕುರಿತ ಆಕ್ರೋಶವನ್ನೂ ಕಾಂಗ್ರೆಸ್ ತನ್ನ ಕಡೆಗೆ ಪರಿವರ್ತಿಸಿಕೊಂಡಿತ್ತು. ಆದರೆ ಇಂದು ಕೋವಿಡ್ ಸಾವುಗಳು ಹಾಗೂ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಹಾನಿ ಕೂಡ ಕಾಂಗ್ರೆಸ್‌ಗೆ ಹೆಚ್ಚಿನ ಲಾಭ ಉಂಟುಮಾಡುವಂತೆ ಕಾಣುತ್ತಿಲ್ಲ.
ಇದನ್ನೂ ಓದಿ | Gujarat Election 2022 | ಅಸ್ಮಿತೆ ಹಾದಿಯಲ್ಲಿ ಬಿಜೆಪಿ, ಮಾರ್ಗ ಬದಲಿಸಿದ ಕೈ, ರೋಡ್ ಬ್ರೇಕರ್ ಆಪ್!
ಸ್ಪರ್ಧಿಗಳು: ಕಳೆದ 25 ವರ್ಷಗಳಿಂದಲೂ ಗುಜರಾತ್‌ನಲ್ಲಿ ನಡೆದ ಚುನಾವಣೆಯ ಸ್ಪರ್ಧೆಗಳು ದ್ವಿಪಕ್ಷೀಯವಾಗಿದ್ದವು. 1980 ಹಾಗೂ 1990ರಲ್ಲಿ ಜನತಾದಳ ಸ್ವಲ್ಪ ಮಟ್ಟಿಗೆ ಆಟವಾಡಿತ್ತು. ಆದರೆ ಈ ಬಾರಿ ಆಪ್ ಪ್ರಬಲ ಪೈಪೋಟಿ ನೀಡುತ್ತಿದೆ. ಆದರೆ ಆಪ್, ಬಿಜೆಪಿ ಅಥವಾ ಕಾಂಗ್ರೆಸ್‌ಗಳಲ್ಲಿ ಯಾರಿಗೆ ಹೆಚ್ಚು ಹಾನಿ ಮಾಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಂಘಟನೆ ಹಾಗೂ ಸಂಪನ್ಮೂಲದ ದೃಷ್ಟಿಯಿಂದ ಬಲಿಷ್ಠವಾಗಿರುವ ಬಿಜೆಪಿಗೆ ಹೋಲಿಸಿದರೆ ಹೆಚ್ಚಿನ ಏಟು ತಿನ್ನುವ ಸ್ಥಾನದಲ್ಲಿ ಕಾಂಗ್ರೆಸ್ ಇದ್ದಂತಿದೆ.
ಆಪ್ ಜತೆಗೇ ಎಐಎಂಐಎಂ ಹಾಗೂ ಭಾರತೀಯ ಬುಡಕಟ್ಟು ಪಾರ್ಟಿ ಕೂಡ ಸ್ಪರ್ಧೆ ನೀಡಿವೆ. ಇವು ಮುಸ್ಲಿಮರು ಹಾಗೂ ಆದಿವಾಸಿಗಳ ಮತಕ್ಕೆ ಕನ್ನ ಹಾಕಿವೆ. ಇವೆರಡೂ ಸಮುದಾಯಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗಳಾಗಿದ್ದವು. ಇವೆರಡೂ ಪಕ್ಷಗಳೂ ಕಾಂಗ್ರೆಸ್‌ನ ಊಟದಲ್ಲಿ ಸಿಂಹಪಾಲು ಕಬಳಿಸುವ ಸೂಚನೆ ನೀಡಿವೆ. ಎಐಎಂಐಎಂನ ರಾಜ್ಯ ಅಧ್ಯಕ್ಷ ಸಬೀರ್‌ಭಾಯಿ ಕಬ್ಲೀವಾಲಾ ಅವರು ಈ ಮೊದಲು ಜಮಾಲ್‌ಪುರದ ಕಾಂಗ್ರೆಸ್ ಶಾಸಕರಾಗಿದ್ದವರು. 2012ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅವರು ಶೇ.24 ಮತಗಳನ್ನು ಗಳಿಸಿದ್ದರು. ಇವರೀಗ ಪಕ್ಷದ ಬಲಿಷ್ಠ ಅಭ್ಯರ್ಥಿಗಳಲ್ಲೊಬ್ಬರು.
ಪಕ್ಷಾಂತರಗಳು: ಕಾಂಗ್ರೆಸ್‌ನ ಹಲವಾರು ನಾಯಕರು ಬಿಜೆಪಿಯತ್ತ ಗುಳೆ ಹೋಗಿದ್ದಾರೆ. 2017ರಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ 77 ಶಾಸಕರಲ್ಲಿ 14 ಮಂದಿ ಈಗಾಗಲೇ ಬಿಜೆಪಿಗೆ ಹೋಗಿದ್ದಾರೆ. 2017ರ ಚುನಾವಣೆಗೆ ಮುನ್ನ ಕೂಡ ಇದೇ ರೀತಿಯ ಪಕ್ಷಾಂತರ ಪರ್ವ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದೆಂದರೆ ಭಾವೀ ಬಿಜೆಪಿ ಅಧ್ಯರ್ಥಿಗೆ ಮತ ಹಾಕುವುದೆಂದೇ ಅರ್ಥ ಎಂದು ಆಪ್ ಹಾಗೂ ಎಐಎಂಐಎಂ ಟೀಕೆ ಮಾಡುತ್ತಿದ್ದವು.
ಇದನ್ನೂ ಓದಿ | Gujarat Election | ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 125 ಸೀಟು: ಗೆಹ್ಲೋಟ್ ವಿಶ್ವಾಸ