Site icon Vistara News

Amrit Bharat Train: ‌’ಬಡವರ ಭಾಗ್ಯ’ ಅಮೃತ ಭಾರತ ರೈಲಿನ ವಿಶೇಷತೆಗಳು ಏನೇನು?

Amrit Bharat Express Train

What are the features of new Amrit Bharat express train?

ನವದೆಹಲಿ: ದೇಶದಲ್ಲಿ ವಂದೇ ಭಾರತ್‌ ರೈಲುಗಳು ಜನರನ್ನು ಆಕರ್ಷಿಸುತ್ತಿರುವ ಬೆನ್ನಲ್ಲೇ ಭಾರತೀಯ ರೈಲ್ವೆಯು ಅಮೃತ ಭಾರತ ಎಕ್ಸ್‌ಪ್ರೆಸ್‌ ಹೆಸರಿನ ಹೊಸ ರೈಲುಗಳನ್ನು ಪರಿಚಯಿಸುತ್ತಿದೆ. ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಡಿಸೆಂಬರ್‌ 30) ಎರಡು ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ ನೀಡಿದ್ದಾರೆ. ವಂದೇ ಭಾರತ್‌ ರೈಲಿನಿಂದ ಸ್ಫೂರ್ತಿಗೊಂಡು ನಿರ್ಮಿಸಲಾಗಿರುವ ಅಮೃತ ಭಾರತ ರೈಲುಗಳು ಬಡವರು ಹಾಗೂ ಮಧ್ಯಮ ವರ್ಗದವರು ಉತ್ತಮ ರೈಲು ಸಂಚಾರದ ಅನುಭವ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಅಮೃತ ಭಾರತ ರೈಲಿನ ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ.

ಏನಿದು ಪುಶ್-ಪುಲ್ ರೈಲು?

ವಿಶೇಷ ಎಂದರೆ ಭಾರತೀಯ ರೈಲ್ವೆ ಹೈಸ್ಪೀಡ್ ಬುಲೆಟ್ ರೈಲುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಆವಿಷ್ಕಾರಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಪುಶ್-ಪುಲ್ ರೈಲುಗಳ (Push-Pull trains) ಪರಿಚಯ. ಏಷ್ಯಾದ ಅತಿದೊಡ್ಡ ರೈಲು ಜಾಲವಾಗಿ, ಭಾರತೀಯ ರೈಲ್ವೆ ಪ್ರತಿದಿನ 1 ಕೋಟಿಗೂ ಹೆಚ್ಚು ಪ್ರಯಾಣಿಕರ ಸಾರಿಗೆ ಅಗತ್ಯಗಳನ್ನು ಪೂರೈಸುತ್ತಿದೆ. ಆ ಪೈಕಿ ಬಹುತೇಕರು ಮಧ್ಯಮ ವರ್ಗದವರು ಮತ್ತು ಕಡಿಮೆ ಆದಾಯ ಹೊಂದಿದವರು. ಈ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಭಾರತೀಯ ರೈಲ್ವೆ ಪುಶ್-ಪುಲ್ ರೈಲುಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌, ಹೈಸ್ಪೀಡ್ ರೈಲಿನಂತೆಯೇ ಪುಶ್-ಪುಲ್ ರೈಲು ಕೂಡ ಉತ್ತಮ ದರ್ಜೆಯ ಪ್ರಯಾಣದ ಅನುಭವವನ್ನು ನೀಡಲಿದೆ. ಇದರಲ್ಲಿ ಎಸಿ ಇರುವುದಿಲ್ಲ. ಹೀಗಾಗಿ ಟಿಕೆಟ್‌ ದರವೂ ಕಡಿಮೆ ಇರಲಿದೆ. ಆರಂಭದ ಪುಶ್-ಪುಲ್ ರೈಲು ಸೇವೆಯು ಪಟನಾ ಮತ್ತು ಮುಂಬೈ ನಡುವೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು ಈ ನಗರಗಳ ನಡುವೆ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಮೆಟ್ರೋ ವ್ಯವಸ್ಥೆಯಂತೆಯೇ ಈ ನೂತನ ರೈಲಿನ ವಿನ್ಯಾಸವು ಎರಡು ಎಂಜಿನ್‌ಗಳನ್ನು ಒಳಗೊಂಡಿದೆ. ಒಂದು ರೈಲಿನ ಮುಂಭಾಗದಲ್ಲಿರೆ ಇನ್ನೊಂದು ಹಿಂಭಾಗದಲ್ಲಿದೆ. ಈ ಎರಡೂ ಎಂಜಿನ್‌ಗಳು ರೈಲನ್ನು ಒಂದೇ ದಿಕ್ಕಿನಲ್ಲಿ ತಳ್ಳಲು ಮತ್ತು ಎಳೆಯಲು ಸಹಕರಿಸುತ್ತವೆ.

ಇದನ್ನೂ ಓದಿ: Vande Bharat Train: ವಂದೇ ಭಾರತ್ ರೈಲಿನಿಂದಾಗಿ ವಿಮಾನ ಪ್ರಯಾಣ ಮತ್ತಷ್ಟು ಅಗ್ಗ!

ಅನುಕೂಲಗಳೇನು?

ಈ ವಿನ್ಯಾಸದ ಪ್ರಮುಖ ಅನುಕೂಲವೆಂದರೆ ಸಾಂಪ್ರದಾಯಿಕ ಮಾದರಿಗಳಿಗೆ ಹೋಲಿಸಿದರೆ ರೈಲಿನ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇದು ಹೆಚ್ಚಿನ ಬೋಗಿಗಳನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಪುಶ್-ಪುಲ್ ರೈಲುಗಳಿಗೆ ಕಡಿಮೆ ಶಕ್ತಿಯುತ ಎಂಜಿನ್‌ ಸಾಕಾಗುತ್ತದೆ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಎರಡು ಎಂಜಿನ್ ಗಳನ್ನು ಹೊಂದಿದ್ದರೂ ಈ ರೈಲುಗಳನ್ನು ಓರ್ವ ಚಾಲಕ ನಿರ್ವಹಿಸುತ್ತಾನೆ. ಈ ರೈಲು ಸಾಮಾನ್ಯ ಮತ್ತು ಸ್ಲೀಪರ್ ಬೋಗಿ ಒಳಗೊಂಡಂತೆ ಒಟ್ಟು 22 ಬೋಗಿಗಳನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version