ನವದೆಹಲಿ: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಾಗೇಶ್ವರ ಧಾಮ್ (Bageshwar Dham) ಧಾರ್ಮಿಕ ಕ್ಷೇತ್ರದ ಪೀಠಾಧೀಶ್ವರ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Krishna Shashtri) ಅವರು ವಿವಾದದ ಕೇಂದ್ರ ಬಿಂದುವಾಗಿದ್ದಾರೆ. 26 ವರ್ಷ ವಯಸ್ಸಿನ ಈ ಶಾಸ್ತ್ರಿ ಅವರು ಬಾಗೇಶ್ವರ್ ಬಾಬಾ (Bageshwar Baba) ಎಂದೂ ಖ್ಯಾತರಾಗಿದ್ದಾರೆ. ಬಾಗೇಶ್ವರ ಧಾಮ್ ಸರ್ಕಾರ್, ಸತ್ಸಂಗ ವೇಳೆ ಅವರ ಪ್ರದರ್ಶಿಸುವ ಪವಾಡಗಳಿಗೆ ಜನರು ಮಾರು ಹೋಗುತ್ತಿದ್ದಾರೆ. ಏತನ್ಮಧ್ಯೆ ಅವರು ಜನರಲ್ಲಿ ಮೂಢನಂಬಿಕೆ ಬಿತ್ತುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ. ಮಹಾರಾಷ್ಟ್ರದ ನಾಗ್ಪುರದ ಮೂಢನಂಬಿಕೆ ವಿರೋಧಿ ಸಂಸ್ಥೆಯು ಬಾಬಾ ವಿರುದ್ಧ ಹೋರಾಟವನ್ನೇ ಆರಂಭಿಸಿದೆ.
ಕಾಗದದಲ್ಲಿ ಎಲ್ಲವನ್ನೂ ಬರೀತಾರೆ!
ಬಾಗೇಶ್ವರ್ ಬಾಬಾ ಅವರ ಸತ್ಸಂಗಕ್ಕೆ ಸಾವಿರಾರು ಜನರು ನೆರೆಯುತ್ತಾರೆ. ಈ ಸಂದರ್ಭದಲ್ಲಿ ಜನರ ಮಧ್ಯೆ ಇರುವ ವ್ಯಕ್ತಿಯ ಹೆಸರಿನಿಂದಲೇ ಕರೆದು ಅಚ್ಚರಿ ಮೂಡಿಸುತ್ತಾರೆ. ಇಷ್ಟು ಮಾತ್ರವಲ್ಲದೇ, ಆ ವ್ಯಕ್ತಿ ಎದುರಿಸುತ್ತಿರುವ ಸಮಸ್ಯೆಗಳು, ಅವು ಎಷ್ಟು ದಿನಗಳಿಂದ ಇವೆ, ಅವಗಳಿಗೆ ಮಾಡಬೇಕಾದ ಪರಿಹಾರ ಇತ್ಯಾದಿ ಮಾಹಿತಿಯನ್ನು ಕಾಗದದ ಮೇಲೆ ಬರೆಯುತ್ತಾರೆ. ಈ ಕಾರ್ಯಕ್ಕೆ ಯಾರೂ ಸಹಾಯ ಕೂಡ ಮಾಡುವುದಿಲ್ಲ. ಇಷ್ಟೆಲ್ಲ, ನಿಖರವಾಗಿ ಹೇಳುತ್ತಿದ್ದಂತೆ ಎದುರಿಗಿದ್ದ ವ್ಯಕ್ತಿ ಬಾಬಾ ಅವರ ಪವಾಡಕ್ಕೆ ಮಾರು ಹೋಗುತ್ತಾರೆ. ವಿಶೇಷ ಎಂದರೆ, ಬಾಬಾ ಬರೆಯುವ ಎಲ್ಲ ಸವಿಸ್ತಾರ ಮಾಹಿತಿ, ಸಮಸ್ಯೆಗಳು ಆ ವ್ಯಕ್ತಿಯ ವಿವರಕ್ಕೂ ಮತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋಲಿಕೆಯಾಗುತ್ತದೆ!
ಇದನ್ನೂ ಓದಿ Bageshwar Dham: ಯಾರು ಈ ಬಾಗೇಶ್ವರ್ ಬಾಬಾ? ಯಾಕೆ ಸುದ್ದಿಯಲ್ಲಿದ್ದಾರೆ ಈ ವ್ಯಕ್ತಿ?
ಇನ್ನೊಂದು ಪವಾಡ ಹೀಗಿದೆ…
ಮತ್ತೊಂದು ಸತ್ಸಂಗದಲ್ಲಿ ಬಾಗೇಶ್ವರ್ ಬಾಬಾ ಅವರು ಪವಾಡವೊಂದನ್ನು ಮಾಡಿದ್ದು ವೈರಲ್ ಆಗಿದೆ. ಸತ್ಸಂಗ ನಡೆಯುತ್ತಿರುವಾಗಲೇ ವ್ಯಕ್ತಿಯೊಬ್ಬ ತನ್ನ ದೇಹದಲ್ಲಿ ದೆವ್ವ(ಪ್ರೇತ, ಆತ್ಮ) ಸೇರಿಕೊಂಡಿದೆ ಎಂದು ಹೇಳುತ್ತಾನೆ. ಇದರಿಂದ ತನಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಾನೆ. ಆಗ ಬಾಗೇಶ್ವರ್ ಬಾಬಾ ಅವರು ಆ ವ್ಯಕ್ತಿಯ ದೇಹದಲ್ಲಿ ದೆವ್ವವನ್ನು ಓಡಿಸಿ, ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆ ಸಂದರ್ಭದಲ್ಲಿ ಆ ವ್ಯಕ್ತಿಯ ದೇಹದಲ್ಲಿದ್ದ ದೆವ್ವವೂ ಬಾಬಾನೊಂದಿಗೆ ಮಾತನಾಡುತ್ತದೆ. ಇದನ್ನು ಕಂಡ ಜನಸ್ತೋಮ ಅಚ್ಚರಿಯಾಗುತ್ತದೆ.