Site icon Vistara News

Draupadi murmu: ರಾಷ್ಟ್ರಪತಿಗೆ ತಿಂಗಳ ಸಂಬಳ 5 ಲಕ್ಷ ರೂ., ಇನ್ನೂ ಏನೇನು ಸೌಲಭ್ಯ?

rashtrapathi bhavan

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರೀಗ ಅಧಿಕೃತವಾಗಿ ದೇಶದ ಮೊದಲ ಪ್ರಜೆ. ಆದರೆ ನಮ್ಮ ದೇಶದ ಮೊದಲ ಪ್ರಜೆ ಎಲ್ಲಿರುತ್ತಾರೆ? ಅವರ ಅಧಿಕಾರಗಳೇನು? ಅವರಿಗೆಷ್ಟು ಸಂಬಳ? ಭತ್ಯೆ, ಸಾರಿಗೆ ಸೌಲಭ್ಯ ಹೇಗೆ? ಈ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು.

ರಾಷ್ಟ್ರಪತಿ ಭವನ

ರಾಷ್ಟ್ರಪತಿಗಳು ವಾಸ ಮಾಡುವ ರಾಷ್ಟ್ರಪತಿ ಭವನ, ಜಗತ್ತಿನಲ್ಲೇ ಅತಿ ದೊಡ್ಡದಾದ ಅಧ್ಯಕ್ಷೀಯ ಭವನಗಳಲ್ಲಿ ಒಂದು. ಸರ್‌ ಎಡ್ವರ್ಡ್‌ ಲ್ಯುಟೆನ್‌ ಮತ್ತು ಹರ್ಬರ್ಟ್‌ ಬೇಕರ್‌ ಎಂಬ ಇಬ್ಬರು ಆರ್ಕಿಟೆಕ್ಟ್‌ಗಳ ಕೌಶಲದಿಂದ ಮೈವೆತ್ತ ಈ ಭವನ ನಿರ್ಮಾಣ ಶುರುವಾದದ್ದು 1912ರಲ್ಲಿ, ಪೂರ್ತಿಯಾದದ್ದು 1929ರಲ್ಲಿ. ದೇಶದ ಮೊದಲ ವೈಸರಾಯ್‌ ಇಲ್ಲಿ ಬಂದು ಕುಳಿತದ್ದು 1931ರಲ್ಲಿ. ನಾಲ್ಕು ಮಹಡಿಗಳಿರುವ ಇದರ ಎತ್ತರ 55 ಮೀಟರ್‌. ಕಟ್ಟಡದ ವಿಸ್ತಾರ 2 ಲಕ್ಷ ಚದರಡಿ. ಈ ಭವನದ ಕ್ಯಾಂಪಸ್‌ನ ವಿಸ್ತಾರ 330 ಎಕರೆ. ಭವನದಲ್ಲಿ 340 ಕೋಣೆಗಳಿವೆ. ಸುಂದರವಾದ ಕೋಣೆಗಳ ನಡುವೆ ಒಂದು ಬೃಹತ್ತಾದ ಲೈಬ್ರರಿ ಹಾಗೂ ಓದುವ ಕೋಣೆಯೂ ಇದೆ.

ಈ ಭವನದಲ್ಲಿ ರಾಷ್ಟ್ರಪತಿಗಳದೇ ಒಂದು ಅಶ್ವದಳವಿದೆ. ಸ್ಪೆಶಾಲಿಟಿ ಆಸ್ಪತ್ರೆಗಳಿವೆ. ದೊಡ್ಡದೊಂದು ಗಾಲ್ಫ್‌ ಅಂಗಣವಿದೆ. 15 ಎಕರೆಗಳಲ್ಲಿ ಹರಡಿಕೊಂಡ ಪಾರಂಪರಿಕ ಮೊಗಲ್‌ ಗಾರ್ಡನ್‌ ಈ ಭವನದ ವಿಶೇಷ. ಇದಕ್ಕೆ ಸ್ಫೂರ್ತಿ ಜಮ್ಮು ಕಾಶ್ಮೀರ ಹಾಗೂ ತಾಜ್‌ಮಹಲ್‌ ಸುತ್ತಮುತ್ತಲಿನ ಮೊಗಲ್‌ ಉದ್ಯಾನಗಳು. ಇದಲ್ಲದೇ ಇನ್ನೂ ನಾಲ್ಕು ಬಗೆಯ ಉದ್ಯಾನಗಳಿವೆ. ಭಾರತ ಮತ್ತು ಪರ್ಷಿಯಾದ ಅನೇಕ ಮಿನಿಯೇಚರ್‌ ಪೇಂಟಿಂಗ್‌ ಇವೆ.

ರಾಷ್ಟ್ರಪತಿಗಳು ದೇಶದ ಮೂರೂ ಸೇನಾಪಡೆಗಳ ಪ್ರಧಾನ ದಂಡನಾಯಕರು. ಅಂದರೆ ಯಾವುದೇ ಮಹತ್ತರ ಸೈನ್ಯ ಕಾರ್ಯಾಚರಣೆಗೂ ರಾಷ್ಟ್ರಪತಿ ಓಕೆ ಎನ್ನಬೇಕು.

ಸಂಬಳ ಎಷ್ಟು?

ಮೂಲಗಳ ಪ್ರಕಾರ 7ನೇ ವೇತನ ಆಯೋಗದ ಅನ್ವಯದ ಬಳಿಕ ರಾಷ್ಟ್ರಪತಿಗಳ ಮಾಸಿಕ ಸಂಬಳ 200 ಶೇಕಡದಷ್ಟು ಏರಿದ್ದು, 5 ಲಕ್ಷ ರೂಪಾಯಿ ಆಗಿದೆ. 2017ರವರೆಗೂ ಅವರ ಸಂಬಳ 1.50 ಲಕ್ಷ ರೂ. ಇತ್ತು.

ಅವರು ನಿವೃತ್ತರಾದ ಬಳಿಕ ಮಾಸಿಕ 1.50 ಲಕ್ಷ ರೂ. ನಿವೃತ್ತಿವೇತನ ಪಡೆಯುತ್ತಾರೆ. ಉಚಿತ ವೈದ್ಯಕೀಯ ಸೇವೆ, ವಸತಿ, ಒಬ್ಬ ಸಂಗಾತಿಯ ಜತೆಗೆ ಉಚಿತ ಪ್ರಯಾಣ ಸೌಲಭ್ಯಗಳು ಅವರು ನಿವೃತ್ತರಾದ ಮೇಲೂ ಜೀವಾವಧಿಗೆ ಮುಂದುವರಿಯುತ್ತವೆ. ಸಂಗಾತಿಗೂ ಉಚಿತ ವೈದ್ಯಕೀಯ ಸೇವೆ, ಸರ್ಕಾರಿ ವಾಹನ, ಭದ್ರತೆ, ವಸತಿಒ ದೊರೆಯುತ್ತದೆ. ಅಧಿಕಾರದಲ್ಲಿದ್ದಾಗ ಅಥವಾ ನಿವೃತ್ತರಾದ ಮೇಲೂ, ಅವರು ನಿಧನರಾದ ಬಳಿಕ ಅವರ ಕುಟುಂಬಕ್ಕೆ ಅರ್ಧ ಮಾಸಿಕ ಪಿಂಚಣಿ ದೊರೆಯುತ್ತದೆ.

ಇದನ್ನೂ ಓದಿ: Draupadi Murmu | 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು

ರಾಷ್ಟ್ರಪತಿಗಳ ಯೋಗಕ್ಷೇಮ ನೋಡಿಕೊಳ್ಳಲು ನೂರಾರು ಸಿಬ್ಬಂದಿಗಳಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನವಲ್ಲದೆ ದೇಶದ ಇತರ ಎರಡು ಕಡೆ ಪ್ರೆಸಿಡೆಂಟ್‌ಗೇ ಮೀಸಲಾದ ಐಷಾರಾಮಿ ಪ್ರವಾಸಿ ಭವನಗಳಿವೆ. ಅವು ಹೈದರಾಬಾದಿನ ರಾಷ್ಟ್ರಪತಿ ನಿಲಯಂ ಹಾಗೂ ಶಿಮ್ಲಾದ ರಿಟ್ರೀಟ್‌ ಬಿಲ್ಡಿಂಗ್.‌ ಇವು ರಾಷ್ಟ್ರಪತಿಗಳ ಈಶಾನ್ಯ ಭಾರತ ಹಾಗೂ ದಕ್ಷಿಣ ಭಾರತದ ಕಾರ್ಯಾಚರಣೆಯ ಕೇಂದ್ರಗಳಾಗಿವೆ.

ರಾಷ್ಟ್ರಪತಿಗಳು ಓಡಾಡಲು ಕಪ್ಪು ಮರ್ಸಿಡಿಸ್‌ ಬೆಂಜ್‌ (Black Mercedes Benz S600 (W221) Pullman Guard) ಕಾರು ಬಳಸುತ್ತಾರೆ. ಇದು ಸಂಪೂರ್ಣ ಗುಂಡುನಿರೋಧಕ ಹಾಗೂ ಜೀವರಕ್ಷಕ ವ್ಯವಸ್ಥೆಗಳನ್ನು ಹೊಂದಿದೆ. ಇವರ ರಕ್ಷಣೆಗಾಗಿಯೇ ಪ್ರತ್ಯೇಕ ಪಡೆ (The President’s Bodyguard (PBG) ಇದೆ. ಇದು ಸೈನ್ಯದ ಅತ್ಯಂತ ಹಿರಿಯ ಹಾಗೂ ಅತಿ ಹಳೆಯ ದಳ. ಇವರು ತರಬೇತಿ ಪಡೆದ ಪ್ಯಾರಾಟ್ರೂಪರ್‌ಗಳಾದುದರಿಂದ ಶಾಂತಿ ಸಮಯದಲ್ಲಿ ಔಪಚಾರಿಕ ಪಡೆಯಾಗಿಯೂ, ಯುದ್ಧ ಸಮಯದಲ್ಲಿ ಯೋಧರಾಗಿಯೂ ಕಾರ್ಯ ನಿರ್ವಹಿಸಬಲ್ಲರು.

ಇದನ್ನೂ ಓದಿ: Draupadi Murmu | ಅಮೃತಕಾಲದಲ್ಲಿ ರಾಷ್ಟ್ರಪತಿ ಹುದ್ದೆ ಕೊಟ್ಟಿದ್ದಕ್ಕೆ ಧನ್ಯವಾದಗಳು: ದ್ರೌಪದಿ ಮುರ್ಮು

Exit mobile version