Site icon Vistara News

Hijab Row | ಜಸ್ಟೀಸ್ ಹೇಮಂತ್ ಗುಪ್ತಾ, ಸುಧಾಂಶು ಧುಲಿಯಾ ತಮ್ಮ ತೀರ್ಪಿನಲ್ಲಿ ಹೇಳಿದ್ದೇನು?

ನವ ದೆಹಲಿ: ಹಿಜಾಬ್ ನಿಷೇಧ (Hijab Row) ಸಂಬಂಧ ಸುಪ್ರೀಂ ಕೋರ್ಟ್ ಭಿನ್ನ ತೀರ್ಪು ನೀಡಿ, ಇಡೀ ಪ್ರಕರಣದ ವಿಚಾರಣೆಯನ್ನು ವಿಸ್ತೃತಪೀಠಕ್ಕೆ ವರ್ಗಾವಣೆ ಮಾಡಿದೆ. ದೇಶ ಮಾತ್ರವಲ್ಲದೇ ವಿದೇಶಿ ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದ ಹಿಜಾಬ್ ನಿಷೇಧ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಸದ್ಯಕ್ಕೆ ಅಂತ್ಯ ಕಂಡಿಲ್ಲ. ಹಾಗಾದರೆ, ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠ ಹಿಜಾಬ್ ನಿಷೇಧ ಸಂಬಂಧ ತಮ್ಮ ತೀರ್ಪಿನಲ್ಲಿ ಏನು ಹೇಳಿದ್ದಾರೆ ನೋಡೋಣ ಬನ್ನಿ.

ನ್ಯಾ. ಸುಧಾಂಶು ಧುಲಿಯಾ ಹೇಳಿದ್ದು ಏನು?
ಹಿಜಾಬ್ ನಿಷೇಧ ಸರಿಯಿಲ್ಲ. ಕರ್ನಾಟಕ ಹೈಕೋರ್ಟ್ ತೀರ್ಪು ತಪ್ಪು ದಾರಿಯನ್ನು ತುಳಿದಿದೆ. ಹಿಜಾಬ್ ಧರಿಸುವುದು ಅಂತಿಮವಾಗಿ ಆಯ್ಕೆಯ ಸ್ವಾತಂತ್ರ್ಯವಾಗಿದೆ. ಸಂವಿಧಾನದ ಆರ್ಟಿಕಲ್ 14 ಮತ್ತು ಆರ್ಟಿಕಲ್ 19 ಕೂಡ ಇದನ್ನೇ ಹೇಳುತ್ತದೆ. ಇದು ಕೇವಲ ಆಯ್ಕೆಯ ಸ್ವಾತಂತ್ರ್ಯವಷ್ಟೇ, ಹೆಚ್ಚೂ ಅಲ್ಲ ಮತ್ತು ಕಡಿಮೆಯೂ ಅಲ್ಲ. ಈ ಪ್ರಕರಣದಲ್ಲಿ ಹಿಜಾಬ್ ಇಸ್ಲಾಮ್ ಆಚರಣೆಯ ಅತ್ಯಗತ್ಯ ಪದ್ಧತಿಯೇ ಅಥವಾ ಅಲ್ಲ ಎಂಬ ಹಾದಿಯಲ್ಲಿ ಚರ್ಚೆ ಮಾಡಿದ್ದೇ ತಪ್ಪು. ನನ್ನ ಮನಸ್ಸಿನಲ್ಲಿ ಮುಖ್ಯವಾಗಿ ಹೆಣ್ಣು ಮಗುವಿನ ಶಿಕ್ಷಣ ಕಾಳಜಿ ಇದೆ. ನನ್ನ ಸಹೋದರ ನ್ಯಾಯಾಧೀಶರನ್ನು ತೀರ್ಪನ್ನು ನಾನು ಗೌರವಯುತವಾಗಿ ಒಪ್ಪುವುದಿಲ್ಲ.

ನ್ಯಾ. ಹೇಮಂತ್ ಗುಪ್ತಾ ಏನು ಹೇಳಿದರು?
ಜಸ್ಟೀಸ್ ಹೇಮಂತ್ ಗುಪ್ತಾ ಅವರು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ 26 ಅರ್ಜಿಗಳನ್ನು ವಜಾ ಮಾಡಿದರು. ಸರ್ಕಾರದ ಆದೇಶವನ್ನು ಸಕ್ರಮಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದ್ದಾರೆ. ಮೇಲ್ಮನವಿಗಳ ವಿರುದ್ಧದ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ಸರಿ ಇದೆ. ಹಾಗಾಗಿ ಮೇಲ್ಮನವಿಗಳನ್ನು ವಜಾಗೊಳಿಸಲು ಮುಂದಾಗಿದ್ದೇನೆ.

ಏನಾಗಿತ್ತು?
ಕರ್ನಾಟಕದಲ್ಲಿ ಪದವಿ ಪೂರ್ವ ಕಾಲೇಜ್‌ಗಳು, ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.

ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ ಸತತವಾಗಿ ವಿಚಾರಣೆ ನಡೆಸಿ, ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು. ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ. ಕರ್ನಾಟಕ ಸರ್ಕಾರವು ಫೆಬ್ರವರಿ 5ರಂದು ಆದೇಶ ಹೊರಡಿಸಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು.

ಹಲವು ದಿನಗಳವರೆಗೆ ಸುಪ್ರೀಂ ಕೋರ್ಟ್‌ ಹಿಜಾಬ್‌ ವಿಚಾರಣೆ ನಡೆಸಿತ್ತು. ಹಿಜಾಬ್‌ ಪ್ರಕರಣ ತೀವ್ರವಾಗುವುದರ ಹಿಂದೆ ಪಿಎಫ್‌ಐ ಕೈವಾಡ ಇದೆ ಎಂದು ಕರ್ನಾಟಕ ಸರ್ಕಾರ ತಿಳಿಸಿತ್ತು. ಮುಸ್ಲಿಂ ಬಾಲಕಿಯರು ಹಿಜಾಬ್‌ ಧರಿಸುವುದು ಮೂಲ ಹಕ್ಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

Exit mobile version