ನವ ದೆಹಲಿ: ಕೇಂದ್ರ ಸರ್ಕಾರ 2016ರಲ್ಲಿ ಕೈಗೊಂಡಿದ್ದ ನೋಟು ಅಮಾನ್ಯತೆಯ ಕ್ರಮವನ್ನು (Demonetisation verdict ) ಸುಪ್ರೀಂಕೋರ್ಟ್ ಸೋಮವಾರ 4:1 ಬಹುಮತದಿಂದ ಅಂಗೀಕರಿಸಿದೆ.
ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ, ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ಮಾತ್ರ ವಿರುದ್ಧ ತೀರ್ಪನ್ನು ನೀಡಿದ್ದಾರೆ. ಇದರೊಂದಿಗೆ 500 ರೂ. ಹಾಗೂ 1,000 ರೂ. ನೋಟು ಅಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ 58 ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸುಪ್ರೀಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?
ನೋಟು ಅಮಾನ್ಯತೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ನೋಟು ಅಮಾನ್ಯತೆಯ ಉದ್ದೇಶ ಈಡೇರಿತೇ, ಇಲ್ಲವೇ ಎಂಬುದು ಇಲ್ಲಿ ಅಪ್ರಸ್ತುತ. ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ದೋಷಗಳು ಸಂಭವಿಸಿಲ್ಲ. ಏಕೆಂದರೆ ನೋಟು ಬ್ಯಾನ್ ಘೋಷಣೆಗೆ 6 ತಿಂಗಳು ಮೊದಲು ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ಸಮಾಲೋಚನೆ ನಡೆದಿತ್ತು ಎಂದು ನ್ಯಾಯಮೂರ್ತಿ ಬಿಆರ್ ಗವಾಯ್ ಹೇಳಿದರು.
ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದ್ದೇನು?
ನ್ಯಾಯಮೂರ್ತಿ ನಾಗರತ್ನ ಅವರು ಆರ್‌ಬಿಐ ಕಾಯಿದೆಯ 26(2) ಅಡಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರದ ಬಗ್ಗೆ ಪ್ರಸ್ತಾಪಿಸಿದರು. ನೋಟು ಅಮಾನ್ಯತೆಯ ಕಾನೂನಾತ್ಮಕ ಅಂಶಗಳನ್ನು ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಗಜೆಟ್ ಅಧಿಸೂಚನೆಯ ಮೂಲಕ ಕೈಗೊಂಡಿದ್ದು ಸರಿಯಲ್ಲ. ರಾಷ್ಟ್ರೀಯ ಮಹತ್ವದ ಇಂಥ ವಿಷಯದಲ್ಲಿ ಸಂಸತ್ತನ್ನು ದೂರವಿಟ್ಟಿದ್ದು ಸಮಂಜಸವಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ.
ನೋಟು ಅಮಾನ್ಯತೆಯ ವಿಷಯದಲ್ಲಿ ಆರ್‌ಬಿಐನ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸಿಲ್ಲ. ಆರ್‌ಬಿಐನ ಅಭಿಪ್ರಾಯವನ್ನು ಮಾತ್ರ ಕೇಳಲಾಗಿತ್ತು. ಇದು ಸರಿಯಲ್ಲ ಎಂದು ಅವರು ಹೇಳಿದ್ದರು.
ಕೇಂದ್ರ ಸರ್ಕಾರದ ವಾದ ಏನಾಗಿತ್ತು?
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ನೋಟು ಅಮಾನ್ಯತೆಯನ್ನು ಸೂಕ್ತ ಸಮಾಲೋಚನೆ ನಡೆಸಿಯೇ ಕೈಗೊಳ್ಳಲಾಗಿತ್ತು. ಕಪ್ಪುಹಣವನ್ನು ನಿರ್ಮೂಲನೆ ಮಾಡುವ ಭಾಗವಾಗಿ, ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ಸ್ಥಗಿತಗೊಳಿಸುವುದು ಹಾಗೂ ತೆರಿಗೆ ಸೋರಿಕೆಯನ್ನು ತಡೆಯುವ ಕಾರ್ಯಕ್ರಮದ ಒಂದು ಭಾಗವಾಗಿ ನೋಟು ಅಮಾನ್ಯತೆಯನ್ನು ಕೈಗೊಳ್ಳಲಾಯಿತು ಎಂದು ಸಮರ್ಥಿಸಿತ್ತು. 2016ರ ನವೆಂಬರ್ 8 ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯತೆಯನ್ನು ಘೋಷಿಸಿತ್ತು.