Site icon Vistara News

Rename of places : ಐತಿಹಾಸಿಕ ಸ್ಥಳಗಳ ಹೆಸರು ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ, ಸುಪ್ರೀಂಕೋರ್ಟ್‌ ಹೇಳಿದ್ದೇನು?

Supreme Court On Article 370

Article 370: Constitution doesn’t restrict President from reorganising a state

ನವ ದೆಹಲಿ: ಅತಿಕ್ರಮಣಕಾರರ ಕಾಲದಲ್ಲಿ ಬದಲಿಸಿದ್ದ ಐತಿಹಾಸಿಕ ಸ್ಥಳಗಳು ಮತ್ತು ನಗರಗಳ ಹೆಸರುಗಳನ್ನು ಮರು ನಾಮಕರಣಗೊಳಿಸಬೇಕು (Rename of places) ಎಂದು ಕೋರಿ ಬಿಜೆಪಿ ನಾಯಕ ಹಾಗೂ ವಕೀಲರಾದ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್‌ ಮತ್ತು ಬಿವಿ ನಾಗರತ್ನ ಅವರನ್ನು ಒಳಗೊಂಡಿದ್ದ ಪೀಠವು, ಅರ್ಜಿದಾರರ ಅರ್ಜಿ ಸಂವಿಧಾನದ ಜಾತ್ಯತೀತ ತತ್ತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿತು.

ನಾವು ಜಾತ್ಯತೀತರು ಮತ್ತು ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಬೇಕು. ನೀವು ಕಳೆದುಹೋಗಿರುವ ಕಾಲದ ಬಗ್ಗೆ ಕಳವಳಪಡುತ್ತಿದ್ದೀರಿ. ಮತ್ತು ಕಳೆದು ಹೋಗಿರುವ ಗತಕಾಲದ ಹೊರೆಯನ್ನು ವರ್ತಮಾನದ ಪೀಳಿಗೆಯ ಎದುರು ಇಡುತ್ತಿದ್ದೀರಿ. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನದಿಂದ ಸೌಹಾರ್ದತೆಗೆ ಮತ್ತಷ್ಟು ಧಕ್ಕೆಯೇ ಆಗಲಿದೆ ಎಂದು ಪೀಠ ಪ್ರತಿಪಾದಿಸಿತು.

ಅರ್ಜಿದಾರರು ಗತಕಾಲದ ಘಟನೆಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತಾಪಿಸುತ್ತಿದ್ದಾರೆ. ಜತೆಗೆ ಇಡೀ ಸಮುದಾಯವನ್ನೇ ಅನಾಗರಿಕ ಎಂದು ಕರೆಯುವುದು ಸಮಂಜಸವಲ್ಲ. ದೇಶದ ಇತಿಹಾಸವು ತನ್ನ ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗಳನ್ನು ಬೇಟೆಯಾಡಬಾರದು ಎಂದು ಸುಪ್ರೀಂಕೋರ್ಟ್‌ ಪೀಠ ಹೇಳಿತು.

ಹಿಂದೂ ಧರ್ಮ ಸೈದ್ಧಾಂತಿಕವಾಗಿ ಅತ್ಯಂತ ಶ್ರೇಷ್ಠ ಧರ್ಮ. ಅದು ನಿರ್ದಿಷ್ಟ ಮತ (religion) ಅಲ್ಲ. ದಯವಿಟ್ಟು ಅದನ್ನು ದುರ್ಬಲಗೊಳಿಸದಿರಿ. ಜಗತ್ತು ಯಾವಾಗಲೂ ನಮ್ಮನ್ನು ನೋಡುತ್ತದೆ. ನಾನೊಬ್ಬ ಕ್ರಿಶ್ಚಿಯನ್‌ ಆಗಿದ್ದರೂ, ಹಿಂದೂ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಅರಿತುಕೊಳ್ಳಲು ಯತ್ನಿಸಿದ್ದೇನೆ. ಇದನ್ನು ಪೂರ್ವಾಗ್ರಹಪೀಡಿತ ಉದ್ದೇಶಗಳಿಗೆ ದುರ್ಬಳಕೆ ಮಾಡದಿರಿ. ನಾನೂ ಕೇರಳದಿಂದ ಬಂದಿರುವೆ. ಅಲ್ಲಿ ಹಿಂದೂಗಳೂ ಚರ್ಚ್‌ಗಳಿಗೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಜೋಸೆಫ್‌ ತಿಳಿಸಿದರು.

ಹಿಂದೂ ಧರ್ಮ ಉದಾತ್ತವಾಗಿರುವುದರಿಂದಲೇ ಜೀವನ ಮಾರ್ಗವಾಗಿದೆ ಹಾಗೂ ಅದು ಪರಮತ ದ್ವೇಷಿಯಲ್ಲ. ಆದ್ದರಿಂದಲೇ ಇಲ್ಲಿ ಎಲ್ಲರೂ ಒಟ್ಟಾಗಿ ಬಾಳುತ್ತಿದ್ದಾರೆ. ದೇಶದಲ್ಲಿ ಇತರ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಮೊದಲು ಬಗೆಹರಿಸಬೇಕು. ಬ್ರಿಟಿಷ್‌ ಮೂಲದ ಒಡೆದು ಆಳುವ ನೀತಿ ಸಮಾಜಕ್ಕೆ ಒಳ್ಳೆಯದಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದರು.

ಈ ವಿಷಯವನ್ನು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಕೋರ್ಟ್‌ ಪರಿಗಣಿಸಿದೆ. ಅದರ ಪ್ರಕಾರ ಕೋರ್ಟ್‌ ಮೂಲಭೂತ ಹಕ್ಕುಗಳಿಗೆ ಬದ್ಧವಾಗಿದೆ. ಸಂವಿಧಾನದ ಪ್ರಕಾರ ಭಾರತ ಜಾತ್ಯತೀತ ರಾಷ್ಟ್ರವಾಗಿದೆ. 9 ತೀರ್ಪುಗಳು ಇದನ್ನು ಎತ್ತಿ ಹಿಡಿದಿದೆ. ದೇಶವು ಗತಕಾಲದ ಕೈದಿಯಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಪೀಠ ಹೇಳಿದೆ.

ಅಶ್ವಿನಿ ಕುಮಾರ್‌ ಉಪಾಧ್ಯಾಯ ವಾದವೇನಾಗಿತ್ತು?

ಅಶ್ವಿನಿ ಕುಮಾರ್‌ ಉಪಾಧ್ಯಾಯ

ದೇಶದಲ್ಲಿ ಈ ಹಿಂದೆ ಅತಿಕ್ರಮಣಕಾರರ ಕಾಲದಲ್ಲಿ ಹೆಸರುಗಳನ್ನು ಬದಲಿಸಲಾಗಿತ್ತು. ಅದನ್ನು ಮತ್ತೆ ಮೂಲ ಹೆಸರಿಗೆ ಮರು ನಾಮಕರಣ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ಆಯೋಗವನ್ನು ರಚಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ನಾವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಆದರೆ ಈಗಲೂ ಹಲವಾರು ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳ ಮತ್ತು ನಗರಗಳಿಗೆ ಅನಾಗರಿಕ ಮತ್ತು ಕ್ರೂರಿಗಳಾಗಿದ್ದ ವಿದೇಶಿ ಅತಿಕ್ರಮಣಕಾರರು ಇಟ್ಟಿರುವ ಹೆಸರುಗಳನ್ನೇ ಮುಂದುವರಿಸಲಾಗಿದೆ. ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸಬೇಕು. ಈ ದೇಶದ ಐತಿಹಾಸಿಕ ನಗರ ಮತ್ತು ಸ್ಥಳಗಳಿಗೆ ಅವುಗಳ ಮೂಲ ಹೆಸರುಗಳನ್ನೇ ಮರು ನಾಮಕರಣಗೊಳಿಸಬೇಕು. ಈ ಮೂಲಕ ಅತಿಕ್ರಮಣಕಾರರು ಬಿಟ್ಟುಹೋಗಿರುವ ಕ್ರೌರ್ಯದ ಕೃತ್ಯಗಳ ಪರಿಣಾಮವನ್ನು ನಿರ್ಮೂಲನೆಗೊಳಿಸಬೇಕು ಎಂದು ಅರ್ಜಿದಾರರು ವಿವರಿಸಿದ್ದರು. ಹಿಂದೂಗಳು ಅಫಘಾನಿಸ್ತಾನದಿಂದ ಸಂಪೂರ್ಣ ಅಳಿಸಿ ಹೋಗಿದ್ದಾರೆ. ದೇಶದ 9 ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಸಂವಿಧಾನವು ವಿದೇಶಿ ಅತಿಕ್ರಮಣಕಾರರ ಪರ ಇಲ್ಲ ಎಂಬುದು ನನ್ನ ಗ್ರಹಿಕೆಯಾಗಿದೆ ಎಂದು ಉಪಾಧ್ಯಾಯರು ಅರ್ಜಿಯಲ್ಲಿ ಹೇಳಿದ್ದರು.

Exit mobile version