ನವದೆಹಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡುವ ಚುನಾವಣೆ ಬಾಂಡ್‌ಗಳ (Electoral Bonds) ಕುರಿತು ಮಾಹಿತಿ ನೀಡಲು ಇನ್ನಷ್ಟು ಸಮಯ ಬೇಕು ಎಂದು ಅರ್ಜಿ ಸಲ್ಲಿಸಿದ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ (SBI) ಸುಪ್ರೀಂ ಕೋರ್ಟ್ (Supreme Court) ಛೀಮಾರಿ ಹಾಕಿದೆ. “ಚುನಾವಣೆ ಬಾಂಡ್‌ಗಳ ಕುರಿತು ಮಾಹಿತಿ ನೀಡಬೇಕು ಎಂದು ತೀರ್ಪು ನೀಡಿ 26 ದಿನ ಆಗಿದೆ. ಇಷ್ಟು ದಿನ ಏನು ಮಾಡಿದಿರಿ” ಎಂದು ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಲು ಜೂನ್ 30ರವರೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಿತು. ಎಸ್‌ಬಿಐ ಪರ ಹರೀಶ್ ಸಾಳ್ವೆ ವಾದ ಮಂಡಿಸಿದರು. “ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಲು ಇನ್ನಷ್ಟು ಸಮಯ ಬೇಕು. ಎಲ್ಲ ಮಾಹಿತಿಯನ್ನು ಒಗ್ಗೂಡಿಸಿ ಚುನಾವಣೆ ಆಯೋಗಕ್ಕೆ ನೀಡಲಾಗುತ್ತದೆ. ಅದಕ್ಕಾಗಿ ಸಮಯ ಬೇಕು” ಎಂದು ವಾದ ಮಂಡಿಸಿದರು.
Supreme Court tells SBI that in its judgment, it didn’t ask the bank to do the matching exercise, we have directed a plain disclosure. So to seek time saying that a matching exercise is to be done is not warranted, we have not directed you to do that.
— ANI (@ANI) March 11, 2024
ಎಸ್‌ಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. “ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ಕುರಿತು ಮಾಹಿತಿ ಒದಗಿಸಬೇಕು ಎಂದು ಫೆಬ್ರವರಿ 15ರಂದೇ ತೀರ್ಪು ನೀಡಲಾಗಿದೆ. ಎಸ್‌ಬಿಐ ಇದುವರೆಗೆ ಏನು ಮಾಡಿತು? ಇಷ್ಟು ದಿನವಾದರೂ ಏಕೆ ಮಾಹಿತಿ ಸಂಗ್ರಹಿಸಲು ಆಗಲಿಲ್ಲ? ಅಷ್ಟಕ್ಕೂ, ಮುಚ್ಚಿದ ಲಕೋಟೆಯಲ್ಲಿ ಏನಿದೆ? ಅದನ್ನು ಮೊದಲು ಬಹಿರಂಗಪಡಿಸಿ. ಎಸ್‌ಬಿಐ ನೀಡಿದ ಡೆಡ್‌ಲೈನ್ ಮುಗಿಯಲು ಎರಡು ದಿನ ಬಾಕಿ ಇರುವಾಗ ಹೆಚ್ಚಿನ ಸಮಯ ಬೇಕು ಎಂದು ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು ಎಂದು ಸಲ್ಲಿಸಲಾಗಿದೆ” ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಚುನಾವಣಾ ಬಾಂಡ್‌ಗಳ ಕುರಿತು ಸಾಮಾನ್ಯ ಮಾಹಿತಿ ನೀಡಲು ಕೂಡ 2-3 ವಾರ ಸಮಯ ಬೇಕು ಎಂದು ಹರೀಶ್ ಸಾಳ್ವೆ ಮನವಿ ಮಾಡಿದರು. ಆಗಲೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಫೆಬ್ರವರಿ 15ರಂದು ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ: Lok Sabha Election 2024: ಮಾರ್ಚ್ 14ಕ್ಕೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ?
22,217 ಚುನಾವಣಾ ಬಾಂಡ್‌ಗಳ ಮಾರಾಟದ ಕುರಿತು ಎಲ್ಲ ಮಾಹಿತಿ ಸಂಗ್ರಹಿಸಲು ಇನ್ನಷ್ಟು ಸಮಯ ಬೇಕು ಎಂದು ಸಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ ಮಾಡಿತ್ತು. ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ತೀರ್ಪಿನ ಪ್ರಕಾರ, ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಬೇಕಿತ್ತು. ಅಷ್ಟೇ ಅಲ್ಲ, ವೆಬ್‌ಸೈಟ್‌ನಲ್ಲಿ ದೇಣಿಗೆ ನೀಡಿದವರ ಮಾಹಿತಿಯನ್ನು ಮಾರ್ಚ್ 13ರೊಳಗೆ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ