Site icon Vistara News

Bilkis Bano: ಕಾನೂನು ಹೋರಾಟದಲ್ಲಿ ಗೆದ್ದ ಬಿಲ್ಕಿಸ್‌ ಬಾನೊ; ಇವರಿಗಾದ ಅನ್ಯಾಯ ಎಂಥಾದ್ದು?

Bilkis Bano Case

What Is Bilkis Bano Case? How She Won In Supreme Court?

ನವದೆಹಲಿ: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಸಾಮೂಹಿಕವಾಗಿ ಅತ್ಯಾಚಾರಕ್ಕೀಡಾಗಿದ್ದ, ತಮ್ಮ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದ ಬಿಲ್ಕಿಸ್‌ ಬಾನೊ (Bilkis Bano) ಅವರಿಗೆ ಕೊನೆಗೂ ನ್ಯಾಯ ದೊರೆತಿದೆ. ಅತ್ಯಾಚಾರ ಎಸಗಿದ 11 ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರದ (Gujarat Government) ಆದೇಶವನ್ನು ಸುಪ್ರೀಂ ಕೋರ್ಟ್‌ (Supreme Court) ರದ್ದುಗೊಳಿಸಿದೆ. ಈಗ ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳಿಗೆ ಜೈಲೇ ಗತಿಯಾಗಿದೆ. ಹಾಗಾಗಿ, ಕಾನೂನು ಹೋರಾಟದಲ್ಲಿ ಬಿಲ್ಕಿಸ್‌ ಬಾನೊ ಅವರು ಗೆಲುವು ಸಾಧಿಸಿದ್ದಾರೆ. ‌

“ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಗುಜರಾತ್‌ ಸರ್ಕಾರವು ವಾಸ್ತವವನ್ನು ಮರೆಮಾಚಿದೆ. ಅಪರಾಧಿಗಳನ್ನು ಬಿಡುಗಡೆ ಮಾಡುವುದು ವಂಚನೆಯಾಗಿದೆ. ಹಾಗಾಗಿ, ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ” ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ತೀರ್ಪು ಹೊರಡಿಸಿದ್ದಾರೆ. ಹಾಗಾದರೆ, ಬಿಲ್ಕಿಸ್‌ ಬಾನೊ ಹಾಗೂ ಅವರ ಕುಟುಂಬದ ಮೇಲೆ 2002ರಲ್ಲಿ ನಡೆದ ದೌರ್ಜನ್ಯ ಎಂಥಾದ್ದು? ಯಾರನ್ನು ಬಿಲ್ಕಿಸ್‌ ಬಾನೊ ಕಳೆದುಕೊಂಡರು? ಅಂದು ಏನಾಯಿತು? ಅವರ ಮೇಲೆ ದೌರ್ಜನ್ಯ ಎಸಗಿದ ಅಪರಾಧಿಗಳು ಯಾರು ಎಂಬುದರ ಮಾಹಿತಿ ಇಲ್ಲಿದೆ.

ಬಿಲ್ಕಿಸ್‌ ಬಾನೊಗೆ ಆದ ಅನ್ಯಾಯ ಎಂಥಾದ್ದು?

2002ನೇ ಇಸ್ವಿಯ ಫೆಬ್ರವರಿ 27ರಂದು ಗುಜರಾತ್​​ನಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋದ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭ ಮಾಡಿದರು. ಅಂತೆಯೇ 20 ವರ್ಷದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ ಕೂಡ. ಆದರೆ ಅದೇ ಹೊತ್ತಲ್ಲಿ ದುರ್ದೈವ ಅವರ ಬೆನ್ನತ್ತಿತ್ತು. 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಗರ್ಭಿಣಿ ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದರು. ಬಿಲ್ಕಿಸ್​ ಬಾನೊ ಮಗಳೂ ಜೀವ ಕಳೆದುಕೊಂಡಳು. ಉಳಿದವರು ಹೇಗೋ ಪಾರಾಗಿ ಓಡಿಹೋದರು.

ಬಿಲ್ಕಿಸ್ ಬಾನೊ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಬಹುದೊಡ್ಡ ಸುದ್ದಿಯಾಯಿತು. ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಯಿತು. 2004ರಲ್ಲಿ ಸುಪ್ರೀಂಕೋರ್ಟ್​ ಈ ಕೇಸ್​​ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾದರು. ಅಹ್ಮದಾಬಾದ್​ ಕೋರ್ಟ್​​ನಲ್ಲಿ ವಿಚಾರಣೆಯೂ ಪ್ರಾರಂಭವಾಯಿತು. ಆದರೆ, ಮತ್ತೆ ಬಿಲ್ಕಿಸ್ ಬಾನೊ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ ‘ಸಿಬಿಐನಿಂದ ಸಂಗ್ರಹಿಸಲ್ಪಟ್ಟ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ಪುರಾವೆಗಳು ನಾಶವಾಗುವ ಆತಂಕ ನನಗೆ ಕಾಡುತ್ತಿದೆ’ ಎಂದು ಹೇಳಿದರು. ಈ ಮೂಲಕ ಗುಜರಾತ್​​ನ ಅಹ್ಮದಾಬಾದ್​ ಕೋರ್ಟ್​ನಲ್ಲಿ ಈ ಕೇಸ್​​ನ ವಿಚಾರಣೆ ಬೇಡ ಎಂದೂ ಮನವಿ ಮಾಡಿದರು. ಹೀಗಾಗಿ 2004ರ ಆಗಸ್ಟ್​ನಲ್ಲಿ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂಬೈ ಕೋರ್ಟ್​ಗೆ ವರ್ಗಾಯಿಸಿತು. ನ್ಯಾಯಾಂಗ ಹೋರಾಟದಲ್ಲಿ ಕೊನೆಗೂ ಬಿಲ್ಕಿಸ್‌ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಅಪರಾಧಿಗಳ ಬಿಡುಗಡೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು.

ಬಿಡುಗಡೆಯಾದ ಅಪರಾಧಿಗಳು ಯಾರು?

ಬಿಲ್ಕಿಸ್​ ಬಾನೊ ಅತ್ಯಾಚಾರ ಕೇಸ್​​ನಲ್ಲಿ ಜೈಲು ಸೇರಿ, ಕಳೆದ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದವರ ಹೆಸರು, ಜಸ್ವಂತ್ ಭಾಯಿ ನಾಯ್, ಗೋವಿಂದಭಾಯಿ ನಾಯ್, ಶೈಲೇಶ್ ಭಟ್, ರಾಧೇಶ್ಯಾಮ್​ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಎಂದಾಗಿದೆ.

ಇದನ್ನೂ ಓದಿ: Bilkis Bano: ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳಿಗೆ ಜೈಲೇ ಗತಿ; ಗುಜರಾತ್‌ ಆದೇಶ ರದ್ದುಗೊಳಿಸಿದ ಸುಪ್ರೀಂ

ಗುಜರಾತ್​ ಸರ್ಕಾರ ಆರೋಪಿಗಳನ್ನು 1992ರ ಕ್ಷಮಾದಾನ ನೀತಿಯ ಅನ್ವಯ ಬಿಡುಗಡೆಗೊಳಿಸಿತ್ತು. ಅಂದರೆ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಸನ್ನಡತೆ ತೋರಿದ್ದನ್ನೇ ಮುಖ್ಯ ಆಧಾರವನ್ನಿಟ್ಟುಕೊಂಡು ಅವರಿಗೆ ಜೈಲಿನಿಂದ ಮುಕ್ತಿ ಕೊಟ್ಟಿತ್ತು. ಆದರೆ, ಗುಜರಾತ್‌ ಸರ್ಕಾರದ ತೀರ್ಪು ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ನ್ಯಾಯಾಂಗ ಹೋರಾಟ ಮುಂದುವರಿಸಿದ್ದರು. ಬಿಲ್ಕಿಸ್‌ ಬಾನೊ ಸೇರಿ ಹಲವು ಸಾಮಾಜಿಕ ಹೋರಾಟಗಾರರು ಕೂಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈಗ ಕೊನೆಗೂ ನ್ಯಾಯಾಂಗ ಹೋರಾಟದಲ್ಲಿ ಬಿಲ್ಕಿಸ್‌ ಬಾನೊ ಗೆದ್ದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version