Site icon Vistara News

ಶ್ರೀಲಂಕಾದಲ್ಲಿ ಲಂಗರು ಹಾಕಿದ ಚೀನಾ ನೌಕೆ; ಭಾರತದ ಆತಂಕವೇನು?, ರಕ್ಷಣೆಗಾಗಿ ಮಾಡಿಕೊಂಡ ಸಿದ್ಧತೆಗಳೇನು?

Chinese Spy Ship

ನವ ದೆಹಲಿ: ಚೀನಾದ ಯುವಾನ್​ ವಾಂಗ್​ 5 ಎಂಬ ಬೇಹುಗಾರಿಕೆ ಹಡಗು ಶ್ರೀಲಂಕಾದ ಹಂಬನ್​ಟೋಟ ಬಂದರನ್ನು ಇಂದು ಮುಂಜಾನೆ ತಲುಪಿದೆ. ಈ ನೌಕೆ ಶ್ರೀಲಂಕಾ ಪ್ರವೇಶ ಮಾಡುವುದನ್ನು ಭಾರತ ಬಲವಾಗಿ ವಿರೋಧಿಸಿತ್ತು. ಹಾಗಿದ್ದಾಗ್ಯೂ ಅದು ಬಂದರಿಗೆ ಬರಲು ಶ್ರೀಲಂಕಾ ಅನುಮತಿ ಕೊಟ್ಟಿಟ್ಟು. ಜುಲೈ 13ರಂದು ಚೀನಾದಿಂದ ಹೊರಟಿದ್ದ ಈ ನೌಕೆ ಆಗಸ್ಟ್​ 11ರಂದೇ ಶ್ರೀಲಂಕಾಕ್ಕೆ ಬಂದು ಲಂಗರು ಹಾಕಬೇಕಿತ್ತು. ಆದರೆ ಶ್ರೀಲಂಕಾ ತನ್ನ ಸ್ನೇಹಿತ ರಾಷ್ಟ್ರ ಭಾರತದೊಂದಿಗೆ ಈ ಬಗ್ಗೆ ಮಾತುಕತೆ ನಡೆಸಬೇಕು ಎಂದು ಹೇಳಿ, ನೌಕೆಯನ್ನು ಸದ್ಯದ ಮಟ್ಟಿಗೆ ತರಬೇಡಿ ಎಂದು ಚೀನಾಕ್ಕೆ ಹೇಳಿತ್ತು. ಭಾರತ-ಶ್ರೀಲಂಕಾ ಮಾತುಕತೆ ವೇಳೆ, ಭಾರತದಿಂದ ಸಮರ್ಪಕ ಉತ್ತರ ಸಿಗದೆ ಇರುವ ಕಾರಣಕ್ಕೆ ಮತ್ತೆ ಚೀನಾ ಬೇಹುಗಾರಿಕಾ ನೌಕೆಯನ್ನು ತರಬಹುದು ಎಂದು ಶ್ರೀಲಂಕಾ ಅನುಮತಿ ಕೊಟ್ಟಿತ್ತು.

ಚೀನಾ ಈ ನೌಕೆಯನ್ನು ಒಂದು ಸಂಶೋಧನಾ ಮತ್ತು ಸಮೀಕ್ಷಾ ನೌಕೆ ಎಂದೇ ಹೇಳಿಕೊಳ್ಳುತ್ತಿದ್ದರೂ, ಭಾರತ ಯಾಕೆ ಅಷ್ಟೊಂದು ವಿರೋಧಿಸುತ್ತಿದೆ? ತಾನು ದಿವಾಳಿಯಾಗುತ್ತಿದ್ದಾಗ ಕೈ ಹಿಡಿದ ಭಾರತದ ಆತಂಕ, ವಿರೋಧದ ನಡುವೆಯೂ ಚೀನಾ ನೌಕೆ ಪ್ರವೇಶಕ್ಕೆ ಶ್ರೀಲಂಕಾ ಅನುಮತಿ ಕೊಟ್ಟಿದ್ದು, ಭಾರತಕ್ಕೆ ಯಾವೆಲ್ಲ ಸಮಸ್ಯೆ ತಂದೊಡ್ಡಲಿದೆ? ಅದಕ್ಕಾಗಿ ಭಾರತ ಯಾವೆಲ್ಲ ಸಿದ್ಧತೆ ಕೈಗೊಂಡಿದೆ? ಇಲ್ಲಿದೆ ಸಮಗ್ರ ವಿವರ

ಈ ಬೇಹುನೌಕೆಯಲ್ಲೇನಿದೆ?
Yuan Wang 5 ನೌಕೆಯನ್ನು ಸಂಶೋಧನೆ ನೌಕೆ ಎಂದು ಚೀನಾ ಕರೆದುಕೊಂಡಿದೆ. ಆದರೆ ಇದು ನೇರವಾಗಿ ಪೀಪಲ್ಸ್‌ ಲಿಬರೇಶನ್‌ ಆರ್ಮಿಯ ವ್ಯೂಹಾತ್ಮಕ ವಿಂಗ್‌ನ ಅಡಿಯಲ್ಲೇ ಇದ್ದು, ಮೂರನೇ ಅತ್ಯಾಧುನಿಕ ತಲೆಮಾರಿನ ನೌಕೆ. ಇದರ ಸಾಧ್ಯತೆ, ಶಕ್ತಿಗಳು ಹಲವು. ಸುಮಾರು 750 ಕಿಮೀ ವ್ಯಾಪ್ತಿಯ ಮೇಲೆ ಸುಲಭವಾಗಿ ಕಣ್ಣಿಡಬಲ್ಲುದು. 25 ಸಾವಿರ ಟನ್‌ ತೂಕದ ಹಡಗು ಇದು. ನಾಲ್ಕು ಹೈ ಪವರ್‌ ಪ್ಯಾರಾಬೋಲಿಕ್‌ ಟ್ರ್ಯಾಕಿಂಗ್‌ ಆಂಟೆನ್ನಾಗಳನ್ನು ಹೊಂದಿರುವ ಈ ನೌಕೆಯು ಭಾರತ ಉಪಖಂಡದ ಮೇಲಿರುವ ತನ್ನ ಸ್ಯಾಟ್‌ಲೈಟ್‌ಗಳಿಂದ ಭಾರತದ ದಕ್ಷಿಣದಲ್ಲಿರುವ ಅನೇಕ ವ್ಯೂಹಾತ್ಮಕ ಪ್ರಾಮುಖ್ಯದ ಸ್ಥಳಗಳ ಮೇಲೆ ಕಣ್ಣಿಡಬಲ್ಲುದು.

ವಿಶಾಖಪಟ್ಟಣದ ಸಬ್‌ಮರೀನ್‌ ನೆಲೆ, ಶ್ರೀಹರಿಕೋಟದ ರಾಕೆಟ್‌ ಉಡಾವಣೆ ಕೇಂದ್ರ, ಕಲ್ಪಾಕಂ, ಕೂಡಂಕುಳಂ, ಒಡಿಶಾದ ಚಂಡೀಪುರ ಡಿಆರ್‌ಡಿಒ ಪ್ರಯೋಗ ಕೇಂದ್ರ, ಕೈಗಾ ಮುಂತಾದ ಪರಮಾಣು ವಿದ್ಯುತ್‌ ನೆಲೆಗಳು ಕೂಡ ಈ ನೌಕೆಯ ಸ್ಯಾಟ್‌ಲೈಟ್‌ ವೀಕ್ಷಣೆಯ ವಲಯದಲ್ಲಿ ಬರಲಿವೆ. ಚೀನಾದ ಮುಖ್ಯ ನೆಲದಿಂದ ಉಡಾಯಿಸಿಬಿಟ್ಟ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ಸ್ಯಾಟ್‌ಲೈಟ್‌ ಟ್ರ್ಯಾಕಿಂಗ್‌ ನಡೆಸಬಲ್ಲದು. ಭಾರತದ ಪೂರ್ವ- ಪಶ್ಚಿಮ- ದಕ್ಷಿಣ ಕರಾವಳಿಯಲ್ಲಿ ಓಡಾಡುವ ವ್ಯೂಹಾತ್ಮಕ ಪ್ರಾಮುಖ್ಯದ ನೌಕೆಗಳ ಮೇಲೆ ಕಣ್ಣಿಡುತ್ತದೆ. ಮಾತ್ರವಲ್ಲ ಭಾರತದ ಸಬ್‌ಮರೀನ್‌ಗಳನ್ನೂ ಟ್ರ್ಯಾಕ್‌ ಮಾಡಬಲ್ಲದು. ಒಟ್ಟಿನಲ್ಲಿ ಇದು ಮನೆ ಬಾಗಿಲಲ್ಲೇ ಕಳ್ಳನನ್ನು ಕೂರಿಸಿದಂತೆ.
1. ಭಾರತದ ಸಬ್‌ಮರೀನ್‌ಗಳ ಚಲನೆ ಟ್ರ್ಯಾಕ್‌ ಮಾಡಬಲ್ಲದು.
2. ಭಾರತದ ಹೊಸ ರಾಕೆಟ್‌ ಉಡಾವಣೆಗಳನ್ನು ಗಮನಿಸಬಲ್ಲದು.
3. ಭಾರತದ ಹೊಸ ಕ್ಷಿಪಣಿ ಪ್ರಯೋಗಗಳನ್ನು ಟ್ರ್ಯಾಕ್‌ ಮಾಡಬಲ್ಲದು.
4. ತನ್ನದೇ ಕ್ಷಿಪಣಿ ನಿಯಂತ್ರಣ ಕಳೆದುಕೊಳ್ಳದಂತೆ ನೋಡಿಕೊಳ್ಳಬಲ್ಲದು..-ಇದೇ ಕಾರಣಗಳಿಗೆ ಭಾರತ ಈ ಬೇಹುಗಾರಿಕೆ ಹಡಗು ಶ್ರೀಲಂಕಾ ಪ್ರವೇಶ ಮಾಡುವುದನ್ನು ವಿರೋಧಿಸಿತ್ತು.

ಭಾರತದ ಸಿದ್ಧತೆ ಏನು?
ಭಾರತವೂ ಸುಮ್ಮನೆ ಕುಳಿತಿಲ್ಲ. ಇಂದು ಯುವಾನ್​ ವಾಂಗ್​ ನೌಕೆ ಶ್ರೀಲಂಕಾಕ್ಕೆ ತಲುಪುವ ಮೊದಲೇ, ಆಗಸ್ಟ್​ 15ರಂದು ಭಾರತ ಶ್ರೀಲಂಕಾಕ್ಕೆ ಡಾರ್ನಿಯರ್​ 228 ಎಂಬ ವಿಮಾನವನ್ನು ಹಸ್ತಾಂತರ ಮಾಡಿದೆ. ಇದೊಂದು ಕಡಲು ಗಸ್ತು ವಿಮಾನವಾಗಿದ್ದು, ಇದರು ಆಗಸದಿಂದ ಭೂ-ಜಲದ ಮೇಲೆ ತೀಕ್ಷ್ಣವಾಗಿ ಗಮನ ಇಡಬಲಿದೆ. ನಮ್ಮ ರೇಡಾರ್‌ಗಳೂ ಸಾಕಷ್ಟು ಬಲವಾಗಿದ್ದು, ನೌಕೆಯನ್ನು ಗಮನಿಸುತ್ತಿವೆ. ಇನ್‌ಸ್ಯಾಟ್‌ ಉಪಗ್ರಹಗಳ ಮೂಲಕ ಇದರ ಮಾಹಿತಿಯನ್ನು ಪಡೆಯುತ್ತಿದೆ. ನಮ್ಮ ದೇಶ ಅಲರ್ಟ್‌ ಆಗಿದೆ ಎಂದು ಭಾರತ ಹೇಳಿಕೊಂಡಿದೆ.

ಇದನ್ನೂ ಓದಿ: ಶ್ರೀಲಂಕಾ ಬಂದರು ತಲುಪಿದ ಚೀನಾ ಬೇಹುಗಾರಿಕೆ ನೌಕೆ; ಅದಕ್ಕೂ ಮೊದಲೇ ವಿಮಾನ ಕಳಿಸಿದ ಭಾರತ

Exit mobile version