Site icon Vistara News

Kochi Stampede: ಕೊಚ್ಚಿ ವಿವಿಯಲ್ಲಿ ಕಾಲ್ತುಳಿತ ಆಗಿದ್ದು ಹೇಗೆ? ಮಳೆರಾಯ ಆದನೇ ಜವರಾಯ?

Kochi University Stampede

What Is The Reason Behind The Stampede In Kochi University?

ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಶ್ಶೇರಿಯಲ್ಲಿರುವ ಕೊಚ್ಚಿ ಯುನಿವರ್ಸಿಟಿ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯಲ್ಲಿ (Cochin University of Science and Technology- CUSAT) ಕಾಲ್ತುಳಿತ ಸಂಭವಿಸಿ (Kochi Stampede) ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಚಿವರ ತುರ್ತು ಸಭೆ ಕರೆದಿದ್ದಾರೆ. ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾಲ್ತುಳಿತಕ್ಕೆ ಕಾರಣ ಏನು?

ಕೊಚ್ಚಿ ವಿಶ್ವವಿದ್ಯಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಂಗೀತ ಕಛೇರಿ (Music Concert) ಆಯೋಜಿಸಲಾಗಿತ್ತು. ಖ್ಯಾತ ಗಾಯಕಿ ನಿಖಿತಾ ಗಾಂಧಿ ಅವರು ಹಾಡುತ್ತಿದ್ದರು. ಬಯಲು ಆಡಿಟೋರಿಯಂನಲ್ಲಿ (Open Air Auditorium) ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಲವು ಕಾಲೇಜುಗಳ ಸುಮಾರು 2 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ, ಇದೇ ವೇಳೆ ಏಕಾಏಕಿ ವರುಣನ ಆಗಮನವಾಗಿದೆ. ಎಲ್ಲಿ ಮಳೆಯಲ್ಲಿ ನೆನೆದು ಬಿಡುತ್ತೇವೋ ಎಂದು ಸಾವಿರಾರು ವಿದ್ಯಾರ್ಥಿಗಳು ಓಡಲು ಆರಂಭಿಸಿದ್ದಾರೆ. ಇದರಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಳೆ ಬಂದ ಕೂಡಲೇ ವಿದ್ಯಾರ್ಥಿಗಳು ಓಡಲು ಆರಂಭಿಸಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ಕೊಚ್ಚಿ ವಿವಿ ಕುಲಪತಿ ಡಾ.ಶಂಕರನ್‌ ಮಾಹಿತಿ ನೀಡಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರು ಸೇರಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿರುವುದನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ದೃಢಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಕಲಮಶ್ಶೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಸುಮಾರು 64 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ವೀಣಾ ಜಾರ್ಜ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೇರಳದ ಕೊಚ್ಚಿ ವಿವಿ ಕಾಲೇಜು ಫೆಸ್ಟ್ ವೇಳೆ ಕಾಲ್ತುಳಿತ, 4 ವಿದ್ಯಾರ್ಥಿಗಳ ಸಾವು

ಒಂದೇ ಗೇಟ್‌ನಲ್ಲಿ ಎಕ್ಸಿಟ್‌, ಎಂಟರ್‌ ಕೂಡ ಕಾರಣ

ಓಪನ್‌ ಏರ್‌ ಆಡಿಟೋರಿಯಂಗೆ ಎಕ್ಸಿಟ್‌ ಹಾಗೂ ಎಂಟರ್‌ (ಪ್ರವೇಶ ಮತ್ತು ನಿರ್ಗಮನ) ಗೇಟ್‌ಗಳಿವೆ. ಆದರೆ, ಮಳೆ ಬಂದ ಕಾರಣ ವಿದ್ಯಾರ್ಥಿಗಳೆಲ್ಲರೂ ಒಂದೇ ಗೇಟ್‌ನತ್ತ ತೆರಳಿದ್ದಾರೆ. ಪ್ರವೇಶ ದ್ವಾರದಿಂದ ನೂರಾರು ವಿದ್ಯಾರ್ಥಿಗಳು ಆಡಿಟೋರಿಯಂ ಒಳಗೆ ಬರುತ್ತಿದ್ದರು. ಆದರೆ, ಸಾವಿರಾರು ವಿದ್ಯಾರ್ಥಿಗಳು ಎಂಟರ್‌ ಗೇಟ್‌ನತ್ತಲೇ ತೆರಳಿದಾಗ ಎಂಟರ್‌ ಆಗುತ್ತಿದ್ದ ವಿದ್ಯಾರ್ಥಿಗಳು ಬಿದ್ದಿದ್ದಾರೆ. ಸಾವಿರಾರು ಜನ ಅವರನ್ನು ತುಳಿದುಕೊಂಡೇ ಎಕ್ಸಿಟ್‌ ಆದ ಕಾರಣ ಗಾಯಾಳುಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Exit mobile version