ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಬಳಿ ಟಾಟಾ ಸನ್ಸ್ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ (Cyrus Mistry Death) ಅವರಿದ್ದ ಕಾರಿನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸೇತುವೆ ಮೇಲೆ ಕಾರು ಅತಿಯಾದ ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಕಾರಿನ ಚಾಲಕಿ ನಿಯಂತ್ರಣ ಕಳೆದುಕೊಂಡ ಕಾರಣ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಕಾರಿನಲ್ಲಿ ಸೈರಸ್ ಮಿಸ್ತ್ರಿ, ಜಹಾಂಗೀರ್ ದಿನ್ಶಾ ಪಂಡೋಳೆ, ಇವರ ಪತ್ನಿ ಡಾ.ಅನಾಹಿತ ಪಂಡೋಳೆ, ಡೇರಿಯಸ್ ಪಂಡೋಳೆ ಚಲಿಸುತ್ತಿದ್ದರು. ಅನಾಹಿತ ಪಂಡೋಳೆ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳದಲ್ಲೇ ಮೃತಪಟ್ಟ ಸೈರಸ್ ಮಿಸ್ತ್ರಿ ಹಾಗೂ ಜಹಾಂಗೀರ್ ಪಂಡೋಳೆ ಶವವನ್ನು ಮುಂಬೈನ ಜೆ.ಜೆ. ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದೇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ತನಿಖೆಗೆ ಆದೇಶಿಸಿದ ಫಡ್ನವಿಸ್
ಸೈರಸ್ ಮಿಸ್ತ್ರಿ ಅವರು ಚಲಿಸುತ್ತಿದ್ದ ಕಾರಿನ ಅಪಘಾತದ ಕುರಿತು ವಿಸ್ತೃತ ತನಿಖೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆದೇಶಿಸಿದ್ದಾರೆ. ಅಪಘಾತದ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಡಿಸಿಎಂ ಆದೇಶಿಸಿದ್ದಾರೆ. ಮಿಸ್ತ್ರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಾಣಿಜ್ಯ, ಉದ್ಯಮ ಕ್ಷೇತ್ರದ ದಿಗ್ಗಜರು ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ | Cyrus Mistry Death | ಸೈರಸ್ ಮಿಸ್ತ್ರಿ: ಉದ್ಯಮ ಜಗತ್ತನ್ನು ಬಿಟ್ಟು ನಡೆದ ದಿಗ್ಗಜ