ನವ ದೆಹಲಿ: ಕಳೆದ ಕೆಲವು ತಿಂಗಳುಗಳಿಂದ ದೇಶಾದ್ಯಂತ ಅನೇಕರಿಗೆ ಎಚ್3ಎನ್2 (H3N2 Virus) ಸೋಂಕಿನ ಜ್ವರ ಕಾಣಿಸಿಕೊಳ್ಳುತ್ತಿದೆ. ಇದು ಸಾಮಾನ್ಯ ಶೀತಜ್ವರಕ್ಕೆ ಕಾರಣವಾಗುವ ವೈರಸ್ನ ರೂಪಾಂತರಿಯಾಗಿದ್ದು, ಜ್ವರ, ಗಂಟಲುನೋವು, ಶೀತ, ವಾಕರಿಕೆ, ಕೆಮ್ಮು ಇದರ ಲಕ್ಷಣಗಳು. ಮೂರರಿಂದ ಐದುದಿನಗಳವರೆಗೆ ಜ್ವರ ಕಾಡುತ್ತದೆ, ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ದಿನೇದಿನೇ ಹೆಚ್ಚುತ್ತಿರುವ ಎಚ್3ಎನ್2 ಸೋಂಕಿನ ಬಗ್ಗೆ ಆರೋಗ್ಯ ಕ್ಷೇತ್ರದ ಅಧಿಕಾರಿಗಳು, ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಎಚ್3ಎನ್2 ಸೋಂಕಿಗೆ ಒಳಗಾದವರು ಐಸಿಯುಗೆ ದಾಖಲಾಗುವ ಸಂಖ್ಯೆಯೂ ಹೆಚ್ಚುತ್ತಿದೆ. ಉಸಿರಾಟದ ಸಮಸ್ಯೆಯೂ ಕಾಡುತ್ತಿದೆ. ಹೀಗಾಗಿ ಯಾರೂ ನಿರ್ಲಕ್ಷ್ಯ ಮಾಡಬೇಡಿ, ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆಯಿರಿ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ. ಹಾಗೇ, ಭಯಬೇಡ ಎಂದು ಧೈರ್ಯವನ್ನೂ ತುಂಬಿದ್ದಾರೆ.
ಎಚ್3ಎನ್2 ಸೋಂಕಿಗೂ; ಕೊವಿಡ್ 19ಗೂ ಏನು ಸಂಬಂಧ?!
ಈ ಎರಡೂ ಸೋಂಕಿನ ಲಕ್ಷಣಗಳು ಬಹುತೇಕ ಒಂದೇ ಆಗಿದ್ದರೂ ಎಚ್3ಎನ್2ಗೂ, ಕೊವಿಡ್ 19ಗೂ ಯಾವುದೇ ಸಂಬಂಧವಿಲ್ಲ. ಇದು ಕೊವಿಡ್ 19ನ ರೂಪಾಂತರಿಯಲ್ಲ ಎಂದು ಈಗಾಗಲೇ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಕೊವಿಡ್ 19 ಮತ್ತು ಎಚ್3ಎನ್2 ಸೋಂಕಿನ ಲಕ್ಷಣಗಳಲ್ಲಿ ಖಂಡಿತ ಸಾಮ್ಯತೆ ಇದೆ. ಇವೆರಡೂ ವೈರಸ್ಗಳು ಏಕಕಾಲದಲ್ಲಿ ಸಮುದಾಯ ಪ್ರಸರಣ ಆಗಬಲ್ಲವು. ಹೀಗಾಗಿ ಯಾರಲ್ಲೇ ಆದರೂ ಶಂಕಿತ ಎಚ್3ಎನ್2 ಕಾಣಿಸಿಕೊಂಡರೆ, ಅವರನ್ನು ಕೊವಿಡ್19 ತಪಾಸಣೆಗೂ ಒಳಪಡಿಸಲೇಬೇಕು ಎಂದೂ ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಎಚ್3ಎನ್2 ಎಂಬುದು ಎಚ್1ಎನ್1 (ಹಂದಿಜ್ವರ)ದ ರೂಪಾಂತರಿ. ಈ ಸೋಂಕು ಪ್ರತಿವರ್ಷ ಒಂದು ಸಲ ವ್ಯಾಪಕವಾಗಿ ಹಬ್ಬುತ್ತದೆ. ಆದರೆ ಈ ಸಲ ಅದರ ರೂಪಾಂತರಿಯಾಗಿ ಎಚ್3ಎನ್2 ಕಾರಣದಿಂದ ಇನ್ನಷ್ಟು ವೇಗವಾಗಿ, ತೀವ್ರ ಲಕ್ಷಣಗಳೊಂದಿಗೆ ಹರಡುತ್ತಿದೆ ಎಂದು ಇಂಟರ್ನಲ್ ಮೆಡಿಸಿನ್ ಎಜುಕೇಶನ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
‘ಪ್ರತಿವರ್ಷವೂ ಹವಾಮಾನ ಬದಲಾವಣೆ ಕಾಲದಲ್ಲಿ ಇಂಥ ಶೀತಜ್ವರ ಉಂಟು ಮಾಡುವ ವೈರಸ್ಗಳು ಹೆಚ್ಚಾಗುತ್ತವೆ. ಅದರಂತೆ ಈ ಸಲವೂ ಕೂಡ ಈಗ ಶೀತಜ್ವರದ ಅಪಾಯ ಹೆಚ್ಚಾಗಿದೆ. ಕೊವಿಡ್ 19 ಸೋಂಕು ಕಡಿಮೆಯಾಗುತ್ತಿದ್ದಂತೆ ನಾವು ಅದರ ನಿಯಂತ್ರಣ ಕ್ರಮಗಳನ್ನೆಲ್ಲ ಮರೆತಿದ್ದೇವೆ. ಮಾಸ್ಕ್ ಧರಿಸುತ್ತಿಲ್ಲ. ಜನಸಂದಣಿ ಪ್ರದೇಶಗಳಲ್ಲೆಲ್ಲ ಆರಾಮಾಗಿ ಓಡಾಡಿಕೊಂಡಿದ್ದೇವೆ. ಗುಂಪುಗೂಡುವಿಕೆ, ದೊಡ್ಡದೊಡ್ಡ ಕಾರ್ಯಕ್ರಮಗಳ ಆಯೋಜನೆ ಮತ್ತೆ ಶುರುವಾಗಿದೆ. ಹೀಗಾಗಿ ಬೇರೆ ಸಾಂಕ್ರಾಮಿಕ ವೈರಸ್ಗಳೂ ಕೂಡ ಸುಲಭವಾಗಿ ಹರಡುತ್ತದೆ’ ಎಂದು ಅವರು ತಿಳಿಸಿದ್ದಾರೆ. ಅದೇನೇ ಆದರೂ ಈಗ ಮತ್ತೊಮ್ಮೆ ಕೊವಿಡ್ 19 ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಉನ್ನತ ಆರೋಗ್ಯಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.