Site icon Vistara News

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Bullet Train

What Is The Status Of Bullet Train? Railway Minister Shares A Video

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ, ದೇಶದ ಶತಕೋಟಿ ಜನರ ಬುಲೆಟ್‌ ಟ್ರೇನ್‌ ಕನಸು ನನಸಾಗುವ ದಿನಗಳು ದೂರವಿಲ್ಲ! ಹೌದು, ದೇಶದ ಮೊದಲ ಬುಲೆಟ್‌ ರೈಲು (Bullet Train) ಸಂಚಾರದ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. “ಮುಂಬೈ-ಅಹಮದಾಬಾದ್‌ ಬುಲೆಟ್‌ (Mumbai to Ahmedabad) ರೈಲು ಯೋಜನೆ ಶೀಘ್ರದಲ್ಲಿಯೇ ಮುಗಿಯಲಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರೊಂದು ವಿಡಿಯೊ ಹಂಚಿಕೊಂಡಿದ್ದು, ರೈಲು ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದಾರೆ.

ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಗಂಟೆಗೆ 320 ಕಿಲೋಮೀಟರ್‌ ವೇಗದಲ್ಲಿ ಓಡಲಿದೆ. ಈಗಾಗಲೇ ದೇಶದ ಮೊದಲ ಬ್ಯಾಲಾಸ್ಟ್‌ಲೆಸ್‌ ಟ್ರ್ಯಾಕ್‌ ಸಿಸ್ಟಮ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಅಷ್ಟೇ ಅಲ್ಲ, 295.5 ಕಿಲೋಮೀಟರ್‌ ರೈಲು ಮಾರ್ಗ ನಿರ್ಮಿಸಲಾಗಿದೆ. 153 ಕಿಲೋಮೀಟರ್‌ ಉದ್ದದ ರೈಲ್ವೆ ಟ್ರ್ಯಾಕ್‌ಅನ್ನು ಸೇತುವೆ ಮೂಲಕ ನಿರ್ಮಿಸಲಾಗಿದೆ ಎಂಬುದಾಗಿ ಅಶ್ವಿನಿ ವೈಷ್ಣವ್‌ ಹಂಚಿಕೊಂಡ ವಿಡಿಯೊದಲ್ಲಿ ತಿಳಿಸಲಾಗಿದೆ.

“ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಬುಲೆಟ್‌ ರೈಲು ಯೋಜನೆಯು ಸಂಪರ್ಕ ಕ್ರಾಂತಿ ಜತೆಗೆ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಬುಲೆಟ್‌ ರೈಲು ಸಂಚರಿಸುವ ಮುಂಬೈ, ವಾಪಿ, ಬರೋಡಾ, ಸೂರತ್‌, ಆನಂದ್‌ ಹಾಗೂ ಅಹಮದಾಬಾದ್‌ ನಗರಗಳು ಆರ್ಥಿಕ ನಗರಗಳಾಗಿ ಬದಲಾಗಲಿವೆ. ಈ ನಗರಗಳಲ್ಲಿ ಪ್ರತ್ಯೇಕ ಆರ್ಥಿಕತೆಯೇ ಸೃಷ್ಟಿಯಾಗುತ್ತದೆ. ಯೋಜನೆಯ ಪ್ರಗತಿಯು ಕ್ಷಿಪ್ರವಾಗಿ ಸಾಗುತ್ತಿದೆ” ಎಂದು ಮಾಹಿತಿ ಕೆಲ ದಿನಗಳ ಹಿಂದಷ್ಟೇ ಅಶ್ವಿನಿ ವೈಷ್ಣವ್‌ ಹೇಳಿದ್ದರು.

ಸೂರತ್‌ನಲ್ಲಿ ತಿಂಡಿ, ಮುಂಬೈನಲ್ಲಿ ಕೆಲಸ

ಬುಲೆಟ್‌ ರೈಲು ಓಡಾಟ ಆರಂಭವಾದ ಬಳಿಕ ಜನರ ಜೀವನಶೈಲಿ ಹೇಗೆ ಬದಲಾಗುತ್ತದೆ? ಸಂಪರ್ಕ ಕ್ರಾಂತಿ ಹೇಗಾಗುತ್ತದೆ ಎಂಬುದನ್ನು ಅಶ್ವಿನಿ ವೈಷ್ಣವ್‌ ಅವರು ಉದಾಹರಣೆ ಸಮೇತ ತಿಳಿಸಿದರು. “ಬುಲೆಟ್ ರೈಲು ಓಡಾಟ ಆರಂಭವಾದರೆ, ಜನ ಸೂರತ್‌ನಲ್ಲಿ ತಿಂಡಿ ತಿಂದು, ಮುಂಬೈನಲ್ಲಿ ಕೆಲಸ ಮುಗಿಸಿಕೊಂಡು, ರಾತ್ರಿ ತಮ್ಮ ಮನೆ ಸೇರಬಹುದು. ಬುಲೆಟ್‌ ರೈಲುಗಳಲ್ಲಿ ಓಡಾಡುವ ಟಿಕೆಟ್‌ ದರ ಕೂಡ ನಿಯಮಿತವಾಗಿಯೇ ಇರಲಿದೆ” ಎಂದು ರೈಲ್ವೆ ಸಚಿವ ತಿಳಿಸಿದರು.

ಇದನ್ನೂ ಓದಿ: PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಕಾರಿಡಾರ್‌ ಯೋಜನೆಯು 2021ರ ನವೆಂಬರ್‌ನಲ್ಲಿ ಆರಂಭವಾಗಿದೆ. ಇದಾದ ಆರು ತಿಂಗಳಲ್ಲಿ ಒಂದು ಕಿಲೋಮೀಟರ್‌ ರೈಲು ಮಾರ್ಗ ನಿರ್ಮಿಸಲಾಗಿದೆ. 2023ರ ಏಪ್ರಿಲ್‌ ವೇಳೆಗೆ 50 ಕಿಲೋಮೀಟರ್‌ ಆಗಿದೆ. ಇದೇ ಕಾರಿಡಾರ್‌ ಭಾಗವಾಗಿ ಎಂಟು ನದಿಗಳಿಗೆ ಸೇತುವೆ ನಿರ್ಮಿಸಲಾಗುತ್ತದೆ. ಮೊದಲ ಬುಲೆಟ್‌ ರೈಲು ಯೋಜನೆಗೆ 1.08 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದಕ್ಕೆ ಜಪಾನ್‌ ಸರ್ಕಾರವು ಕೇವಲ 0.1ರ ಬಡ್ಡಿದರದಲ್ಲಿ ಸಾಲ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version