ಭಾರತದಲ್ಲಿ ಚಳಿ ಕೊರೆಯುತ್ತಿದೆ. ಅದರಲ್ಲೂ ಉತ್ತರ ಭಾರತವಂತೂ ಶೀತಕ್ಕೆ ತತ್ತರಿಸಿ ಹೋಗುತ್ತಿದೆ. ತಾಪಮಾನ ಮೈನಸ್ ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗುತ್ತಿದೆ. ಜನ ಮನೆಯಿಂದ ಹೊರಬರಲಾಗದೆ ಕಷ್ಟಪಡುತ್ತಿದ್ದಾರೆ. ನಗರಗಳಲ್ಲಿ ಫೂಟ್ಪಾತ್ ಮೇಲೆಲ್ಲ ಬೆಂಕಿ ಹಾಕಿಕೊಂಡು ಕಾಯಿಸುತ್ತಿದ್ದಾರೆ. ಭಾರತದಲ್ಲಿ ಈ ಪರಿಸ್ಥಿತಿ ಇರುವಾಗ ಇಡೀ ಭೂಮಿಯಲ್ಲೇ ಅತ್ಯಂತ ಶೀತ ಪ್ರದೇಶ ಎಂದು (ಕು)ಖ್ಯಾತಿ ಪಡೆದ (world’s coldest city) ನಗರದಲ್ಲಿ ಈಗೆಷ್ಟು ಚಳಿ ಬೀಳುತ್ತಿರಬಹದು? ಅಷ್ಟಕ್ಕೂ ಭೂಮಿ ಮೇಲಿನ ಅತ್ಯಂತ ತಂಪು ವಾತಾವರಣ ಇರುವ ಸ್ಥಳ ಯಾವುದು?
ರಷ್ಯಾದ ಸೈಬೀರಿಯಾದಲ್ಲಿರುವ ಯಾಕುಟ್ಸ್ಕ್ ಎಂಬ ನಗರ ಇಡೀ ಪ್ರಪಂಚದಲ್ಲೇ ಅತ್ಯಂತ ಶೀತನಗರ ಎನ್ನಿಸಿಕೊಂಡಿದೆ. ಇದು ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 5000 ಕಿಮೀ ದೂರದಲ್ಲಿ ಇದೆ. ಇಲ್ಲೀಗ ಮೈನಸ್ 50 ಡಿಗ್ರಿ ಸೆಲ್ಸಿಯಸ್ ಚಳಿ ಬೀಳುತ್ತಿದೆಯಂತೆ. ಇಲ್ಲಿ ತಾಪಮಾನ ಸಾಮಾನ್ಯವಾಗಿ ಯಾವಾಗಲೂ ಮೈನಸ್ 40 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಇರುತ್ತದೆ. ಆದರೆ ಈ ಸಲ ಎಲ್ಲ ದಾಖಲೆಗಳನ್ನೂ ಮುರಿದು -50 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಇಲ್ಲಿ ಸದಾ ಚಳಿಯೇ ಇರುವುದರಿಂದ ಅಲ್ಲಿನ ನಿವಾಸಿಗಳಿಗೆ ಒಂದು ಹಂತದಲ್ಲಿ ರೂಢಿಯಾಗಿದೆ. ಆದರೂ ಹೀಗೆ ಚಳಿಯ ಪ್ರಮಾಣ ಜಾಸ್ತಿಯಾಗುತ್ತಿರುವಾಗ ಅವರೂ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ. ಅಡಿಯಿಂದ ಮುಡಿಯವರೆಗೆ ಪೂರ್ತಿಯಾಗಿ ಬಟ್ಟೆ ಧರಿಸಿದರೂ ಚಳಿಯೆಂಬುದು ಮೈಯೊಳಗೆ ನುಸುಳಿ, ಸಂಕಟ ಕೊಡುತ್ತಿದೆ. ಮನೆಯಿಂದ ಹೊರಗೆ ಬರಲಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿರುವುದಾಗಿ ರಾಯಿಟರ್ಸ್ ಮತ್ತಿತರ ಮಾಧ್ಯಮಗಳು ವರದಿ ಮಾಡಿವೆ.
ನೀರನ್ನು ಹೆಚ್ಚೆಚ್ಚು ಕಾಯಿಸಬೇಕಾದ ಅಗತ್ಯ ಇರುವುದರಿಂದ ಬಿಸಿ ನೀರಿನ ಟ್ಯಾಂಕ್ನ ಕೊಳವೆಗಳೆಲ್ಲ ಸ್ಫೋಟಿಸಿ ಹೋಗುತ್ತಿವೆ. ನೀರಿನ ಪೈಪ್ಗಳೂ ಮುರಿಯುತ್ತಿವೆ. ಪ್ರತಿಯೊಂದು ಪದಾರ್ಥಗಳೂ ಗಟ್ಟಿಯಾಗಿಬಿಡುತ್ತಿವೆ. ಸ್ಥಳೀಯ ಆಡಳಿತವೂ ಏನೂ ಮಾಡಲಾಗದ ಪರಿಸ್ಥಿತಿ ಇದೆ ಎಂದು ನಿವಾಸಿಯೊಬ್ಬ ಅಲ್ಲಿನ ಮೆಟ್ರೋ ಸುದ್ದಿಪತ್ರಿಕೆಗೆ ಹೇಳಿದ್ದಾರೆ. ಈ ಪ್ರಮಾಣದಲ್ಲಿ ಚಳಿ ಬೀಳಲು ಕಾರಣ ಮನುಷ್ಯ. ಇದು ಮನುಷ್ಯ ನಿರ್ಮಿತ ಅನಾಹುತ ಎಂದು ಯಾಕುಟ್ಸ್ಕ್ನ ಉಪ ಮೇಯರ್ ವ್ಲಾಡಿಮಿರ್ ಫೆಡೋರೊವ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer | ಉತ್ತರ ಭಾರತವೇಕೆ ಥರಗುಟ್ಟುತ್ತಿದೆ? ಈ ವರ್ಷದ ವಿಪರೀತ ಚಳಿಗೆ ಕಾರಣವೇನು?