Site icon Vistara News

Article 370 : ಸುಪ್ರೀಂ ತೀರ್ಪಿನ ಬಗ್ಗೆ ಜಮ್ಮು- ಕಾಶ್ಮೀರದ ನಾಯಕರು ಏನಂದ್ರು?

Supreme Court

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ (Article 370) ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್​​ನ ಐದು ನ್ಯಾಯಾಧೀಶರು ಬೆಂಬಲಿಸಿದ್ದಾರೆ. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಈ ವಿಷಯದ ಕುರಿತ ಮೂರು ತೀರ್ಪುಗಳನ್ನು ಪ್ರಕಟಿಸಿದೆ. 370ನೇ ವಿಧಿ ತಾತ್ಕಾಲಿಕ ನಿಬಂಧನೆ ಎಂದು ಸುಪ್ರೀಂ ಕೋರ್ಟ್ ಪ್ರಮುಖವಾಗಿ ಅಭಿಪ್ರಾಯಪಟ್ಟಿದೆ.

ಸೆಪ್ಟೆಂಬರ್ 2024 ರೊಳಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಯಾರು ಏನು ಹೇಳಿದರು?

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ತೀರ್ಪನ್ನು “ದುಃಖಕರ ಮತ್ತು ದುರದೃಷ್ಟಕರ” ಎಂದು ಹೇಳಿದ್ದಾರೆ. ಈ ಪ್ರದೇಶದ ಜನರು ತೀರ್ಪಿನಿಂದ ಸಂತೋಷವಾಗಿಲ್ಲ. ಆದರೆ ನಾವು ಅದನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿಕೊಂಡಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದ ಜನರು ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ಗೌರವ ಮತ್ತು ಘನತೆಗಾಗಿ ನಮ್ಮ ಹೋರಾಟವು ಮುಂದುವರಿಯುತ್ತದೆ. ಇದು ನಮಗೆ ಹೋರಾಟದ ಅಂತ್ಯವಲ್ಲ. ಇದು ಭಾರತದ ಕಲ್ಪನೆಯ ನಷ್ಟ” ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ ವಿಡಿಯೊ ಸಂದೇಶವನ್ನು ಪೋಸ್ಟ್​ ಮಾಡಿದ್ದಾರೆ. “ನೀವು ಹಿಡಿದಿದ್ದ ಕೈಗೆ ಗಾಯವಾಗಿದೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮಹಾರಾಜ ಹರಿ ಸಿಂಗ್ ಅವರ ಪುತ್ರ ಕರಣ್ ಸಿಂಗ್, “ಈ ತೀರ್ಪಿನಿಂದ ಸಂತೋಷವಾಗದ ಜಮ್ಮು ಮತ್ತು ಕಾಶ್ಮೀರದ ಒಂದು ವರ್ಗದ ಜನರಿಗೆ ನನ್ನ ಪ್ರಾಮಾಣಿಕ ಸಲಹೆಯೆಂದರೆ ಅವರು ಅನಿವಾರ್ಯತೆಯನ್ನು ಒಪ್ಪಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಈ ಕ್ರಮವನ್ನು ಎತ್ತಿಹಿಡಿದಿದೆ. ಹೀಗಾಗಿ ಅನಗತ್ಯವಾಗಿ ಗೋಡೆಗೆ ತಲೆ ಚಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ, ಎಂದು ಹೇಳಿದ್ದಾರೆ.

ಇದನ್ನೂ ಓದಿ : Article 370: ಆರ್ಟಿಕಲ್‌ 370 ರದ್ದಿನ ಕುರಿತು ಐತಿಹಾಸಿಕ ತೀರ್ಪು: ಯಾವ ನ್ಯಾಯಾಧೀಶರು ಏನೆಂದರು?

“ನನ್ನ ಸಲಹೆಯೆಂದರೆ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ನಾವು ಶಕ್ತಿವಂತರಾಗಬೇಕು. ಜನರು ಈಗ ಯಾವುದೇ ನಕಾರಾತ್ಮಕತೆಯನ್ನು ಬೆಳೆಸುವ ಬದಲು ಪ್ರೇರಣೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ. ನಿರಾಶೆಯಾಗಿದೆ ಆದರೆ ಹತಾಶೆಗೊಂಡಿಲ್ಲ . ಹೋರಾಟ ಮುಂದುವರಿಯುತ್ತದೆ” ಎಂದು ಅವರು ಬರೆದಿದ್ದಾರೆ. ಇಲ್ಲಿಗೆ ತಲುಪಲು ಬಿಜೆಪಿಗೆ ದಶಕಗಳು ಬೇಕಾಯಿತು.. ನಾವು ದೀರ್ಘ ಪ್ರಯಾಣಕ್ಕೂ ಸಿದ್ಧರಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

“370 ನೇ ವಿಧಿಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನಿರಾಶಾದಾಯಕವಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನ್ಯಾಯ ದೊರಕುತ್ತಿಲ್ಲ. 370 ನೇ ವಿಧಿಯನ್ನು ಕಾನೂನುಬದ್ಧವಾಗಿ ಅಳಿಸಿಹಾಕಿರಬಹುದು. ಯಾವಾಗಲೂ ನಮ್ಮ ರಾಜಕೀಯ ಆಕಾಂಕ್ಷೆಗಳ ಭಾಗವಾಗಿ ಉಳಿಯುತ್ತದೆ ” ಎಂದು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್ ಹೇಳಿದರು.

ಬಿಜೆಪಿಯಂದ ಶ್ಲಾಘನೆ

370 ನೇ ವಿಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ದೇಶಕ್ಕೆ ಸೇರಿಸುವ ಐತಿಹಾಸಿಕ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಡಿದೆ, ಇದಕ್ಕಾಗಿ ನಾನು ಮತ್ತು ನಮ್ಮ ಕೋಟ್ಯಂತರ ಕಾರ್ಯಕರ್ತರು ಪ್ರಧಾನಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ” ಎಂದು ಅವರು ಹೇಳಿದರು.

ಜಮ್ಮು ಕಾಶ್ಮೀರ ಈಗ ಸುಮಧುರ ಸಂಗೀತ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಪ್ರತಿಧ್ವನಿಸುತ್ತದೆ. ಏಕತೆಯ ಬಂಧಗಳು ಬಲಗೊಂಡಿವೆ. ಭಾರತದ ಸಮಗ್ರತೆಯನ್ನು ಬಲಪಡಿಸಲಾಗಿದೆ” ಎಂದು ಗೃಹ ಸಚಿವ ಅಮಿತ್ ಶಾ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಮತ್ತು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.

Exit mobile version