ಮುಂಬೈ: ದೇವರ ಎದುರು ಎಲ್ಲರೂ ಸಮಾನರು. ಪುರೋಹಿತರು ಜಾತಿ ಪದ್ಧತಿಯನ್ನು ಹುಟ್ಟು ಹಾಕಿದ್ದು ತಪ್ಪು ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದ್ದಾರೆಂದು ಎಎನ್ಐ (ANI) ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಈಗ ಎಎನ್ಐ, ಮೋಹನ್ ಭಾಗವತ್ ಅವರ ಭಾಷಣವನ್ನು ತಪ್ಪಾಗಿ ಅನುವಾದ ಮಾಡಿದ್ದಾಗಿ ಹೇಳಿ, ತನ್ನ ಹಳೆಯ ಟ್ವೀಟ್ ಡಿಲಿಟ್ ಮಾಡಿದೆ. ಸರಿಯಾದ ಅನುವಾದದ ಟ್ವೀಟ್ ಮಾಡಿರುವ ಎಎನ್ಐ, ”ಶಾಸ್ತ್ರಗಳ ಆಧಾರದ ಮೇಲೆ ಕೆಲವು ಪಂಡಿತರು ಹೇಳುವುದು ಸುಳ್ಳು” ಎಂದು ಭಾಗವತ್ ಹೇಳಿದ್ದಾರೆಂದು ಹೇಳಿದೆ. ಜಾತಿ ಪದ್ಧತಿಗೆ ಪುರೋಹಿತರೇ ಕಾರಣ ಎಂಬ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಹೆಸರು, ಸಾಮರ್ಥ್ಯ ಏನೇ ಇರಲಿ. ಎಲ್ಲರೂ ಒಂದೇ. ಯಾವುದೇ ವ್ಯತ್ಯಾಸಗಳಿಲ್ಲ. ಜಾತಿ ಶ್ರೇಷ್ಠತೆಯ ಭ್ರಮೆಯಿಂದ ನಾವು ದಾರಿ ತಪ್ಪುತ್ತಿದ್ದು, ಈ ಭ್ರಮೆಯನ್ನು ಬದಿಗೊತ್ತಬೇಕಿದೆ. ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಒಂದೇ ಆಗಿರುತ್ತದೆ ಮತ್ತು ಅಭಿಪ್ರಾಯಗಳು ಮಾತ್ರ ವಿಭಿನ್ನವಾಗಿವೆ ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Mohan Bhagwat | ಭಾರತ ಯಾವುದೇ ದೇಶವನ್ನು ಅನುಕರಿಸುವುದು ಬೇಡ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಮುಂಬೈನಲ್ಲಿ ಆಯೋಜಿಸಲಾಗಿದ್ದ ಸಂತ ರೋಹಿದಾಸ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಸಂತ ರೋಹಿದಾಸ ಅವರು ತುಳಸಿದಾಸ, ಕಬೀರ್, ಸೂರದಾಸ ಅವರಿಗಿಂತಲೂ ಶ್ರೇಷ್ಠರು. ಹಾಗಾಗಿಯೇ ಅವರನ್ನು ಸಂತ ಶಿರೋಮಣಿ ಎಂದು ಕರೆಯಲಾಗುತ್ತದೆ. ಹೀಗಿದ್ದೂ ಅವರು ಶಾಸ್ತ್ರಗಳಲ್ಲಿ ಅವರು ಬ್ರಾಹ್ಮಣರನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹಲವರ ಹೃದಯವನ್ನು ಗೆದ್ದ ಅವರು, ದೇವರಲ್ಲಿ ನಂಬಿಕೆ ಬರುವಂತ ಮಾಡಲು ಯಶಸ್ವಿಯಾದರು ಎಂದು ಮೋಹನ್ ಭಾಗವತ್ ಹೇಳಿದರು.