ಪುರಿ: ಒಡಿಶಾದ ಪುರಿ ಜಗನ್ನಾಥ ದೇಗುಲದ (Puri Jagannath Temple) ರತ್ನ ಭಂಡಾರ (Ratna Bhandar)ದ ಕೋಣೆಗಳನ್ನು ಬರೋಬ್ಬರಿ 46 ವರ್ಷಗಳ ಬಳಿಕ ತೆರೆಯಲಾಗಿದ್ದು, ಆ ಮೂಲಕ ಹಲವು ವರ್ಷಗಳಿಂದ ಭಕ್ತರಲ್ಲಿ ಹಾಗೂ ದೇಗುಲದ ನಿಗೂಢ ಕೋಣೆಯಲ್ಲಿ ಅಡಗಿರುವ ಕುತೂಹಲಗಳಿಗೆ ತೆರೆ ಬೀಳುತ್ತಿದೆ. ಕೋಣೆಗಳಿಂದ ಬಂಗಾರ, ಬೆಳ್ಳಿ, ವಜ್ರ ವೈಢೂರ್ಯಗಳಿರುವ ಪೆಟ್ಟಿಗೆಗಳನ್ನು ಹೊರ ತರಲಾಗುತ್ತಿದೆ. ಇನ್ನು, ಇದೇ ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರವನ್ನು 1978ರಲ್ಲಿ ತೆರೆಯಲಾಗಿತ್ತು. ಆಗ ಏನೆಲ್ಲ ಸಿಕ್ಕಿತ್ತು ಎಂಬುದರ ಮಾಹಿತಿ ಇಲ್ಲಿದೆ.
1978ರಲ್ಲಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆಗೆದಿದ್ದಾಗ 128.38 ಕೆ.ಜಿ ಚಿನ್ನ ಸಿಕ್ಕಿತ್ತು. ಚಿನ್ನದ ಸುಮಾರು 454 ಆಭರಣಗಳು ದೊರಕಿದ್ದವು. ಇನ್ನು, ಇದೇ ಖಜಾನೆಯಲ್ಲಿ 221.53 ಕೆ.ಜಿ ಬೆಳ್ಳಿ ಇತ್ತು. ಬೆಳ್ಳಿಯ 293 ಆಭರಣಗಳು ದೊರಕಿದ್ದವು. ಆಗ ಸುಮಾರು 70 ದಿನಗಳವರೆಗೆ ಅಧಿಕಾರಿಗಳು ಶೋಧನೆ ನಡೆಸಿದ್ದರು. ಈಗ ಮತ್ತೆ ರತ್ನ ಭಂಡಾರದ ಆಭರಣಗಳನ್ನು ಲೆಕ್ಕ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.
#Odisha: All the doors of the Ratna Bhandar, the treasure trove of the Lord Sri #JagannathTemple in the holy town of Puri, were opened.
— All India Radio News (@airnewsalerts) July 14, 2024
A special team opened the Ratna Bhandar, which had last been opened in 1985, while the inventory of its jewels and other valuables was last… pic.twitter.com/40FksgoEvf
ಒಡಿಶಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ. ಸರ್ಕಾರದ ಅನುಮೋದನೆಯನ್ನು ಪಡೆದ ನಂತರ, ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP)ಸ್ಥಾಪಿಸಲಾಯಿತು. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತವು (SJTA), ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.
ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ಇದನ್ನೂ ಓದಿ: Puri Jagannath temple: ಬರೋಬ್ಬರಿ 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥನ ರತ್ನ ಭಂಡಾರ