ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಯನ್ನು 2024ರ ಜನವರಿ 22ರಂದು ನೆರವೇರಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಅಲ್ಲದೆ, ರಾಮಮಂದಿರ ಉದ್ಘಾಟನೆಗೆ ಟ್ರಸ್ಟ್‌ನಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವುದಕ್ಕೆ ಕಾಂಗ್ರೆಸ್ (Congress) ಆಕ್ರೋಶ ವ್ಯಕ್ತಪಡಿಸಿದೆ.
“ರಾಮಮಂದಿರ ಉದ್ಘಾಟನೆಯು ಬಿಜೆಪಿಯ ಕಾರ್ಯಕ್ರಮವೇ? ದೇವರು ಎಲ್ಲರಿಗೂ ಸಮಾನ. ಎಲ್ಲ ಪಕ್ಷಗಳಿಗೂ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಬೇಕು. ಎಲ್ಲರಿಗೂ ಆಹ್ವಾನ ಇದೆ ಎಂಬುದನ್ನಾದರೂ ಟ್ರಸ್ಟ್ ತಿಳಿಸಬೇಕು. ಇಂತಹ ಯಾವುದೇ ಘೋಷಣೆ ಅಥವಾ ಪ್ರಕಟಣೆಯೂ ನಮಗೆ ಬಂದಿಲ್ಲ” ಎಂದು ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಮಂದಿರ ಉದ್ಘಾಟನೆಗೆ ಆಹ್ವಾನಿಸಿದ ಟ್ರಸ್ಟ್
जय सियाराम!
— Narendra Modi (@narendramodi) October 25, 2023
आज का दिन बहुत भावनाओं से भरा हुआ है। अभी श्रीराम जन्मभूमि तीर्थ क्षेत्र ट्रस्ट के पदाधिकारी मुझसे मेरे निवास स्थान पर मिलने आए थे। उन्होंने मुझे श्रीराम मंदिर में प्राण-प्रतिष्ठा के अवसर पर अयोध्या आने के लिए निमंत्रित किया है।
मैं खुद को बहुत धन्य महसूस कर रहा… pic.twitter.com/rc801AraIn
ಸಂಜಯ್ ರಾವತ್ ಅಸಮಾಧಾನ
ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಅವರು ಕೂಡ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡುವ ಅಗತ್ಯವಿರಲಿಲ್ಲ. ರಾಮಮಂದಿರ ನಿರ್ಮಾಣವಾಗುತ್ತಿದೆ. ಸಾವಿರಾರು ಕರಸೇವಕರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಎಲ್ಲ ಹಿಂದು ಸಂಘಟನೆಗಳು ಹಾಗೂ ಪಕ್ಷಗಳು ಹೋರಾಟದಲ್ಲಿ ಭಾಗಿಯಾಗಿವೆ. ಶಿವಸೇನೆ, ಬಜರಂಗದಳ, ವಿಶ್ವ ಹಿಂದು ಪರಿಷತ್ ಹೋರಾಟ, ಎಲ್.ಕೆ.ಆಡ್ವಾಣಿಯವರ ರಥಯಾತ್ರೆ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಹೀಗಿರುವಾಗ ನರೇಂದ್ರ ಮೋದಿ ಅವರು ಮಾತ್ರ ಪೂಜೆ ಮಾಡುವುದೇಕೆ? ಇದು ಚುನಾವಣೆಯ ಸಿದ್ಧತೆ ಎಂದು ಅನಿಸುತ್ತಿದೆ” ಎಂದಿದ್ದಾರೆ.
ಜನವರಿ 22ರಂದು ಗರ್ಭಗೃಹದಲ್ಲಿ ರಾಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂಬ ಸುದ್ದಿಯನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಖಚಿತಪಡಿಸಿದ್ದಾರೆ. ಈ ಉದ್ಘಾಟನೆಯ ಸಮಾರಂಭಕ್ಕೆ ಹಾಜರಾಗುವಂತೆ ನೀಡಲಾಗಿರುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ
ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.