Site icon Vistara News

Rahul Gandhi: ರಾಹುಲ್‌ ಗಾಂಧಿ ಇಂದು ಸಂಸತ್ತಿಗೆ ಮರಳುವರೇ? ಸ್ಪೀಕರ್‌ ನಿರ್ಧಾರದ ಮೇಲೆ ಎಲ್ಲರ ಕಣ್ಣು

Rahul Gandhi

When Will Congress Leader Rahul Gandhi Return To Parliament? All Eyes On Speaker Now

ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್‌ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಲೋಕಸಭೆ ಸದಸತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸೋಮವಾರ (ಆಗಸ್ಟ್‌ 7) ಸಂಸತ್ತಿಗೆ ಮರಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರಾಹುಲ್‌ ಗಾಂಧಿ ಅವರ ಅನರ್ಹತೆ ರದ್ದುಗೊಳಿಸುವ ಕುರಿತು ಸೋಮವಾರ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರ ನಿರ್ಧಾರದತ್ತ ಎಲ್ಲರ ಚಿತ್ತ ಇದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯಲ್ಲಿ ರಾಹುಲ್‌ ಗಾಂಧಿ ಅವರು ಕೂಡ ಭಾಗವಹಿಸಬೇಕು ಎಂಬುದು ಕಾಂಗ್ರೆಸ್‌ ನಾಯಕರ ಒತ್ತಾಸೆಯಾಗಿದೆ. ಹಾಗಾಗಿ, ಸೋಮವಾರದ ಕಲಾಪದಲ್ಲಿ ಅವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರ ಮೇಲೆ ಕಾಂಗ್ರೆಸ್‌ ನಾಯಕನಿಗೆ ಸಂಸತ್‌ ಸದಸ್ಯತ್ವವನ್ನು ಮರಳಿ ನೀಡುವ ಕುರಿತು ಒತ್ತಡ ಹೇರಲು, ಆ ಕುರಿತು ಚರ್ಚಿಸಲು ಕಾಂಗ್ರೆಸ್‌ ನಾಯಕರು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಲಕ್ಷದ್ವೀಪ ಎನ್‌ಸಿಪಿ ಸಂಸದ ಪಿ.ಪಿ ಮೊಹಮ್ಮದ್‌ ಫೈಜಲ್‌ ಅವರ ಸದಸ್ಯತ್ವ ಕೂಡ ರದ್ದಾಗಿತ್ತು. ಕೇರಳ ಹೈಕೋರ್ಟ್‌ ಶಿಕ್ಷೆಗೆ ತಡೆಯಾಜ್ಞೆ ನೀಡಿದರೂ ಅವರ ಸಂಸತ್‌ ಸದಸ್ಯತ್ವ ಮರಳಲು ಒಂದು ತಿಂಗಳಿಗಿಂತ ಜಾಸ್ತಿ ಅವಧಿ ತೆಗೆದುಕೊಳ್ಳಲಾಗಿತ್ತು. ಕೊನೆಗೆ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋದ ಕಾರಣ ಮಾರ್ಚ್‌ನಲ್ಲಿ ಅವರಿಗೆ ಮತ್ತೆ ಸಂಸತ್‌ ಸದಸ್ಯತ್ವ ನೀಡಲಾಗಿತ್ತು. ಈ ವಿಳಂಬವನ್ನು ತಡೆಯಲು ಒತ್ತಡ ಹೇರುವ ನಿರ್ಧಾರಕ್ಕೆ ಕಾಂಗ್ರೆಸ್‌ ನಾಯಕರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ಸೋಮವಾರ ಸಂಸತ್‌ ಸದಸ್ಯತ್ವ ಮರಳದಿದ್ದರೆ, ಮಂಗಳವಾರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್;‌ ಮಾನಹಾನಿ ಕೇಸ್‌ ಶಿಕ್ಷೆಗೆ ತಡೆ, ಕೈ ನಾಯಕನಿಗೆ ಮರಳಿದ ಸಂಸದ ಸ್ಥಾನ

ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರನ್ನು ದೋಷಿ ಎಂಬುದಾಗಿ ಘೋಷಿಸಿದ ಸೂರತ್‌ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದ್ದ ಗುಜರಾತ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಶಿಕ್ಷೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. “ರಾಹುಲ್‌ ಗಾಂಧಿ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯವು ಸರಿಯಾದ ಕಾರಣ ನೀಡಿಲ್ಲ. ಹಾಗಾಗಿ, ಶಿಕ್ಷೆಗೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

Exit mobile version