Site icon Vistara News

China Pe Charcha | ʼಚೀನಾ ಪೆ ಚರ್ಚಾ ಯಾವಾಗ?ʼ, ಗಡಿ ಬಿಕ್ಕಟ್ಟಿನ ಕುರಿತು ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು

Mallikarjun Kharge on India China Border Dispute

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ ಸಂಘರ್ಷ ಏರ್ಪಟ್ಟ ಬೆನ್ನಲ್ಲೇ ಗಡಿ ಸುರಕ್ಷತೆ ಕುರಿತು ಕಾಂಗ್ರೆಸ್‌ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. “ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ ಬೆನ್ನಲ್ಲೇ, “ಚೀನಾ ಕುರಿತು ಚರ್ಚೆ ಯಾವಾಗ” (China Pe Charcha) ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲೆಸೆದಿದ್ದಾರೆ.

ಗಡಿಯಲ್ಲಿ ಚೀನಾ ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ಮಾಧ್ಯಮಗಳ ವರದಿಗಳ ಕ್ಲಿಪ್ಪಿಂಗ್‌ಗಳನ್ನು ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿದ್ದಾರೆ. “ಜಂಫೇರಿ ಶ್ರೇಣಿಯವರೆಗೆ ಚೀನಾ ಮೂಲ ಸೌಕರ್ಯ ಅಭಿವೃದ್ಧಿಪಡಿಸಿದೆ. ಇದು ಭಾರತಕ್ಕೆ ವ್ಯೂಹಾತ್ಮಕವಾಗಿ ಪ್ರಮುಖವಾಗಿರುವ ಸಿಲಿಗುರಿ ಕಾರಿಡಾರ್‌ಗೆ ಬೆದರಿಕೆ ಒಡ್ಡುತ್ತಿದೆ. ಇದು ದೇಶದ ಭದ್ರತೆಗೆ ಹೆಚ್ಚು ಆತಂಕ ತಂದೊಡ್ಡಿದೆ. ನರೇಂದ್ರ ಮೋದಿ ಅವರೇ, ಭಾರತದಲ್ಲಿ ಚೀನಾ ಕುರಿತು ಚರ್ಚೆ ಯಾವಾಗ” ಎಂದು ಪ್ರಶ್ನಿಸಿದ್ದಾರೆ.

ಗಡಿ ಬಿಕ್ಕಟ್ಟಿನ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್‌ ಗಾಂಧಿ, “ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದೆ. ಕೇಂದ್ರ ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿ ಇದ್ದ ಹಾಗೆ ಕಾಣಿಸುತ್ತಿದೆ” ಎಂದು ಟೀಕಿಸಿದ್ದರು. ಇದಕ್ಕೆ ಬಿಜೆಪಿಯ ಹಲವು ನಾಯಕರು ತಿರುಗೇಟು ನೀಡಿದ್ದಾರೆ. ಹಾಗಾಗಿ, ಗಡಿ ಬಿಕ್ಕಟ್ಟು ಈಗ ಆರೋಪ-ಪ್ರತ್ಯಾರೋಪದ ಸರಕಾಗಿದೆ.

ಇದನ್ನೂ ಓದಿ | Rahul Gandhi | ʼಇದು ನೆಹರು ಕಾಲದ ಭಾರತವಲ್ಲʼ, ಚೀನಾ, ಸೇನೆ ಬಗ್ಗೆ ರಾಹುಲ್‌ ಹೇಳಿಕೆಗೆ ಬಿಜೆಪಿ ನಾಯಕರ ತಿರುಗೇಟು

Exit mobile version