ಬೆಂಗಳೂರು: ಪ್ರತಿ ವರ್ಷ ಜನವರಿ 26ರಂದು ಭಾರತವು ಅತ್ಯಂತ ಸಡಗರದಿಂದ ಗಣರಾಜ್ಯೋತ್ಸವನ್ನು ಆಚರಿಸುತ್ತದೆ (Republic Day 2023). ಇದೇ ವೇಳೆ, ರಾಷ್ಟ್ರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರನ್ನು ಗುರುತಿಸಿ ಅವರಿಗೆ ನಾಗರಿಕ ಪ್ರಶಸ್ತಿಗಳನ್ನು ಕೂಡ ಘೋಷಣೆ ಮಾಡಲಾಗುತ್ತದೆ. ಇದರ ಜತೆಗೆ, ಶೌರ್ಯ, ಸಾಹಸ ಪ್ರದರ್ಶಿಸಿದ ಸೇನಾ ಯೋಧರು, ಅಧಿಕಾರಿಗಳು ಮತ್ತು ಪೊಲೀಸರಿಗೂ ಕ್ರಮವಾಗಿ ಸೇನಾ ಹಾಗೂ ಪೊಲೀಸ್ ಪದಕ, ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಯಾವೆಲ್ಲ ಪ್ರಶಸ್ತಿ, ಪದಕ, ಪುರಸ್ಕಾರಗಳನ್ನು ಘೋಷಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ(Padma Awards).
ಭಾರತರತ್ನ
ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ. ಭಾರತದ ಪ್ರಧಾನಿಗಳ ಶಿಫಾರಸು ಆಧರಿಸಿ, ರಾಷ್ಟ್ರಪತಿಗಳು ಭಾರತರತ್ನ ಪ್ರಶಸ್ತಿಯನ್ನು ಘೋಷಿಸಿತ್ತಾರೆ. ಭಾರತೀಯರು ಹಾಗೂ ವಿದೇಶಿ ಪ್ರಜೆಗಳಿಗೂ ಘೋಷಣೆ ಮಾಡಬಹುದು.
ಪದ್ಮ ಪ್ರಶಸ್ತಿಗಳು
ಭಾರತದಲ್ಲಿ ಪದ್ಮ ಪ್ರಶಸ್ತಿಗಳಿಗೆ ವಿಶೇಷ ಗೌರವವಿದೆ. ಗಣರಾಜ್ಯೋತ್ಸವದ ಹಿಂದಿನ ಈ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತದೆ. ಈ ಪ್ರಶಸ್ತಿಯನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂದು ವರ್ಗೀಕರಿಸಲಾಗಿದೆ. ಪದ್ಮ ಪ್ರಶಸ್ತಿಗಳ ಘೋಷಣೆಗೆ ಸಮಿತಿಯನ್ನು ಪ್ರತಿ ವರ್ಷ ಪ್ರಧಾನಿಗಳು ರಚಿಸುತ್ತಾರೆ. ಅದರ ಶಿಫಾರಸುಗಳ ಅನ್ವಯ ಘೋಷಿಸಲಾಗುತ್ತದೆ.
ಗ್ಯಾಲಂಟ್ರಿ ಅವಾರ್ಡ್ಸ್
ಈ ಪ್ರಶಸ್ತಿಗಳನ್ನು ಶೌರ್ಯ ತೋರಿಸಿದ ಸೇನಾಧಿಕಾರಿಗಳು, ಯೋಧರಿಗೆ ನೀಡಿ ಗೌರವಿಸಲಾಗುತ್ತದೆ. 1950ರಲ್ಲಿ ಮೊದಲ ಬಾರಿಗೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಎಂಬ ಮೂರು ಗ್ಯಾಲಂಟ್ರಿ ಪ್ರಶಸ್ತಿ ಸ್ಥಾಪಿಸಲಾಯಿತು. ಮತ್ತೆ 1952ರಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಅಶೋಕ ಚಕ್ರ, ಕ್ಲಾಸ್ 1, ಕ್ಲಾಸ್ 2 ಮತ್ತು ಕ್ಲಾಸ್ 3 ಗ್ಯಾಲಂಟ್ರಿ ಪ್ರಶಸ್ತಿ ನೀಡಲಾರಂಭಿಸಿತು. ಆ ನಂತರ, ಈ ಪ್ರಶಸ್ತಿಗಳಿಗೆ ಕ್ರಮವಾಗಿ ಅಶೋಕ ಚಕ್ರ, ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಎಂದು ಹೆಸರಿಸಲಾಯಿತು.
ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ಸ್
ಈ ಪ್ರಶಸ್ತಿಗಳನ್ನು 1951 ಮಾರ್ಚ್ 1ರಂದು ಸ್ಥಾಪಿಸಲಾಯಿತು. ಯಾವುದೇ ಶ್ರೇಣಿ ಅಥವಾ ಸೇವಾ ಹಿರಿತನವನ್ನು ಲೆಕ್ಕಕ್ಕೆ ಪರಿಗಣಿಸದೇ, ಕೇವಲ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಈ ಪದಕಗಳನ್ನು ಪೊಲೀಸರಿಗೆ ಘೋಷಣೆ ಮಾಡಲಾಗುತ್ತದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
18 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಅತ್ಯುತ್ತಮ ಸಾಧನೆ ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತದೆ. ಸಂಶೋಧನೆ, ಶೈಕ್ಷಣಿಕ ಅಥವಾ ಸಾಮಾಜಿಕ ಸೇವೆಗಳಾದ ಕಲೆ, ಶೌರ್ಯ ಅಥವಾ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ ನೀಡಿ ಗೌರವಿಸಲಾಗುತ್ತದೆ.
ಜೀವನ ರಕ್ಷಾ ಪದಕ
ಸರ್ವೋತ್ತಮ ಜೀವನ ರಕ್ಷಕ ಪದಕ, ಉತ್ತಮ ಜೀವನ ರಕ್ಷಾ ಪದಕ ಮತ್ತು ಜೀವನ ರಕ್ಷಾ ಪದಕ.. ಹೀಗೆ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮತ್ತೊಬ್ಬರ ಜೀವವನ್ನು ಕಾಪಾಡಿದವರಿಗೆ ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
ಕರೆಕ್‌ಷನಲ್ ಸರ್ವೀಸ್ ಮೆಡಲ್ಸ್
ವಿಶಿಷ್ಟ ಸೇವೆ, ಶ್ಲಾಘನೀಯ ಸೇವೆ ಹಾಗೂ ಗ್ಯಾಲಂಟ್ರಿಯಾಗಿ ಈ ಕರೆಕ್‌ಷನಲ್ ಸರ್ವೀಸ್ ಪದಕಗಳನ್ನು ಘೋಷಿಸಲಾಗುತ್ತದೆ. ಭಾರತದ ರಾಷ್ಟ್ರಪತಿಗಳು ಜೈಲು ಸಿಬ್ಬಂದಿಗೆ ಈ ಪ್ರಶಸ್ತಿಗಳನ್ನು ಪ್ರಕಟಿಸುತ್ತಾರೆ.