ನವದೆಹಲಿ: ಹೊಸ ಸಂಸತ್ ಭವನದಲ್ಲಿ (New Parliament Building) ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ (Parliament Special Session) ಲೋಕಸಭೆಯು ಬುಧವಾರ (Lok Sabha) ಮಹಿಳಾ ಮೀಸಲು (ನಾರಿ ಶಕ್ತಿ ವಂದನ್ ಅಧಿನಿಯಮ್) ವಿಧೇಯಕಕ್ಕೆ (Women’s Reservation Bill) ತನ್ನ ಒಪ್ಪಿಗೆಯನ್ನು ನೀಡಿದೆ. ಮಹಿಳಾ ಮೀಸಲು ವಿಧೇಯಕದ ಪರ 454 ಸಂಸದರು ಮತ ಚಲಾಯಿಸಿದರೆ, ಇಬ್ಬರು ಸಂಸದರು ಮಾತ್ರ ವಿರುದ್ಧ ಮತ ಹಾಕಿದರು. ಆ ಇಬ್ಬರು ಸಂಸದರು ಯಾರು ಎಂಬ ಚರ್ಚೆ ಶುರುವಾಗಿದೆ. ಎಐಎಂಐಎಂ ನಾಯಕರೂ ಆಗಿರುವ ಹೈದ್ರಾಬಾದ್ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ (AIMIM MP Asaduddin Owaisi) ಮತ್ತು ಮಹಾರಾಷ್ಟ್ರದ ಔರಂಗಾಬಾದ್ ಕ್ಷೇತ್ರದ ಸಂಸದ ಇಮ್ತಿಯಾಜ್ ಜಲೀಲ್ ಸೈಯದ್ (Imtiaz Jaleel Syed) ಅವರು ಮಹಿಳಾ ಮೀಸಲು ವಿರೋಧಿಸಿ ಮತ ಚಲಾಯಿಸಿದ್ದಾರೆ.
ದೋಷಪೂರಿತ ಮಹಿಳಾ ಮೀಸಲು ವಿಧೇಯಕ- ಅಸಾದುದ್ದೀನ್ ಓವೈಸಿ
ಮಹಿಳಾ ಮೀಸಲು ವಿಧೇಯಕ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಅಸಾದುದ್ದೀನ್ ಓವೈಸಿ ಅವರು, ಇದೊಂದು ದೋಷಪೂರಿತ ವಿಧೇಯಕವಾಗಿದೆ. ಇದರಲ್ಲಿ ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರಿಗೆ ಮೀಸಲು ಕಲ್ಪಿಸಿಲ್ಲ. ಹಾಗಾಗಿ ನಾನು ಈ ವಿಧೇಯಕವನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದರು. ಇದೊಂದು ಸವರ್ಣೀಯ ಮೀಸಲು ವಿಧೇಯಕವಾಗಿದೆ ಎಂದು ಆರೋಪಿಸಿದ್ದರು.
“ನಾನು ಈ ವಿಧೇಯಕವನ್ನು ವಿರೋಧಿಸುತ್ತೇನೆ, ವಿಧೇಯಕಕ್ಕೆ ನೀಡಲಾಗುತ್ತಿರುವ ಸಮರ್ಥನೆ ಎಂದರೆ ಹೆಚ್ಚು ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗುತ್ತಾರೆ ಎಂಬುದು. ಇದೇ ಕಾರಣವಾಗಿದ್ದರೆ, ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ಏಕೆ ಈ ಮೀಸಲಾತಿಯನ್ನು ವಿಸ್ತರಿಸಲಾಗುತ್ತಿಲ್ಲ. ಈ ಸಂಸತ್ತಿನಲ್ಲಿ ಮುಸ್ಲಿಮ್ ಮತ್ತು ಮಹಿಳೆಯ ಪ್ರತಿನಿಧಿತ್ವ ಕನಿಷ್ಠವಾಗಿದೆ ಎಂದು ಹೇಳಿದರು. ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮ್ ಮಹಿಳೆಯರ ಪ್ರಮಾಣ ಶೇ.7ರಷ್ಟಿದೆ. ಆದರೆ, ಲೋಕಸಭೆಯಲ್ಲಿ ಅವರ ಪ್ರಮಾಣ ಕೇವಲ 0.7ರಷ್ಟಿದೆ. ಹಾಗಾಗಿ, ಮಹಿಳಾ ಮೀಸಲಿನಲ್ಲಿ ಮುಸ್ಲಿಮ್ ಅವಕಾಶವನ್ನೇ ನೀಡಿಲ್ಲ. ಇದೊಂದು ಅಪೂರ್ಣ, ದೋಷಪೂರಿತ ವಿಧೇಯಕವಾಗಿದೆ ಎಂದು ಹೇಳಿದ್ದರು. ಅಲ್ಲದೇ, ವಿಧೇಯಕವನ್ನು ಮತಕ್ಕೆ ಹಾಕಿದಾಗ, ಅಸಾದುದ್ದೀನ್ ಓವೈಸಿ ಮತ್ತು ಅವರ ಪಕ್ಷದ ಇನ್ನೊಬ್ಬ ಸಂಸದ ಇಮ್ತಿಯಾಜ್ ಜಲೀಲ್ ಸೈಯದ್ ಅವರು ವಿಧೇಯಕದ ವಿರುದ್ಧ ಮತ ಚಲಾಯಿಸಿದರು.
ಲೋಕಸಭೆಯಲ್ಲಿ ಭರ್ಜರಿ ಚರ್ಚೆ
ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲು ವಿಧಯಕ ಕುರಿತು ಭರ್ಜರಿ ಚರ್ಚೆ ನಡೆಯಿತು. ಕಾಂಗ್ರೆಸ್‌ನ ವರಿಷ್ಠ ನಾಯಕಿ ಸೋನಿಯಾ ಗಾಂಧಿಯಾದಿಯಾಗಿ ಪ್ರಮುಖರ ಮಹಿಳಾ ನಾಯಕಿಯರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಂಡರು. ಈ ವೇಳೆ, ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (Mahuva Moitra) ಅವರು, ಮುಸ್ಲಿಮ್ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕೇಂದ್ರ ಸಚಿವ, ಬಿಜೆಪಿಯ ನಾಯಕಿ ಸ್ಮೃತಿ ಇರಾನಿ(Smriti Irani) ಸಂವಿಧಾನದಲ್ಲಿ ಧರ್ಮಾಧರಿತ ಮೀಸಲು ಅವಕಾಶ ಕಲ್ಪಿಸಲ ಅವಕಾಶ ಇಲ್ಲ ಎಂದು ಎಂದು ಹೇಳಿದರು. ಜತೆಗೆ, ಕ್ರೆಡಿಟ್ ಕುರಿತು ಟೀಕಿಸಿದ ಅವರು, ಯಶಸ್ಸಿಗೆ ಅನೇಕ ಅಪ್ಪಂದಿರು ಎಂದು ವ್ಯಂಗ್ಯವಾಡಿದರು. ಇನ್ನು ಸೋನಿಯಾ ಗಾಂಧಿ (Sonia Gandhi) ಅವರು, ಯಾವುದೇ ವಿಳಂಬ ಮಾಡದೇ ಕೂಡಲೇ ಮೀಸಲು ಜಾರಿ ಮಾಡಬೇಕು ಎಂದರೆ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ(Supriya Sule), ಎಸ್‌ಪಿ ನಾಯಕಿ ಡಿಂಪಲ್ ಯಾದವ್ (Dimple Yadv) ಅವರು ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಮೀಸಲು ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ: Women’s Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್; 454 ಸಂಸದರ ಬೆಂಬಲ!
ಸೋನಿಯಾ ಗಾಂಧಿ ಅವರು ಚರ್ಚೆಯನ್ನು ಆರಂಭಿಸಿದರು. ಈಗ ಮಂಡಿಸಲಾಗಿರುವ ಮೀಸಲು ವಿಧೇಯಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲು ಕಲ್ಪಿಸುತ್ತದೆ. ಆದರೆ, 2029ರ ಮೊದಲು ಜಾರಿಗೆ ಬರುವ ಸಂಭವವಿಲ್ಲ. ಇದಕ್ಕೆ ಅವಕಾಶ ನೀಡಬಾರದು, ಈ ಮೀಸಲಿನಲ್ಲಿ ಇತರ ಹಿಂದುಳಿದ ವರ್ಗದ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಪುರುಷ ಸಂಸದ ನಿಶಿಕಾಂತ್ ದುಬೆ ಅವರನ್ನು ಆಯ್ಕೆ ಮಾಡಿದ್ದು ಎಲ್ಲರಿಗೂ ಆಶ್ಚರ್ಯವಾಯಿತು. ಪ್ರತಿಪಕ್ಷಗಳು ಬಿಜೆಪಿಯ ಈ ಸಂಬಂಧ ಕಾಲೆಳೆದವು. ಆಗ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾಕೆ ಮಹಿಳೆಯರ ಸಮಸ್ಯೆಗಳ ಕುರಿತು ಪುರುಷರು ಮಾತನಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.