ಜೈಪುರ: ರಾಜಸ್ಥಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ (Congress) ಬಿಕ್ಕಟ್ಟು, ರಾಜಕೀಯ ಬೆಳವಣಿಗೆಗಳನ್ನು ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷರಾಗುವುದನ್ನು ವಿರೋಧಿಸಿ, ಅವರ ನಿಷ್ಠ ಬೆಂಬಲಿಗ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಬಿಕ್ಕಟ್ಟು ಸೃಷ್ಟಿಯಾಗಿದೆ. ಏತನ್ಮಧ್ಯೆ, ಗೆಹ್ಲೋಟ್ ಈ ಬೆಳವಣಿಗೆಗೆ ಕ್ಷಮೆ ಕೋರಿದ್ದಾರೆ.
ಮತ್ತೊಂದೆಡೆ, ಈ ಎಲ್ಲ ಬೆವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯಕ್ಕೆ ಯಾವುದೇ ಕ್ರಿಯೆಗೆ ಮುಂದಾಗದಿರಲು ಬಿಜೆಪಿ ನಿರ್ಧರಿಸಿದೆ. ಒಂದೊಮ್ಮೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದರೆ, ಸರ್ಕಾರ ರಚಿಸುವ ಹಕ್ಕು ಮಂಡಿಸದಿರಲು ಬಿಜೆಪಿ ತೀರ್ಮಾನಿಸಿದೆ. ಬದಲಿಗೆ ಚುನಾವಣೆಗೆ ಹೋಗಲು ಬಿಜೆಪಿ ನಿರ್ಧರಿಸಿದೆ. ವಾಸ್ತವದಲ್ಲಿ ಮುಂದಿನ ವರ್ಷವೇ ರಾಜಸ್ಥಾನದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಒಂದೊಮ್ಮೆ ಅವಧಿ ಪೂರ್ವ ಚುನಾವಣೆ ಏನಾದರೂ ಎದುರಾದರೆ, ಅದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಬಿಜೆಪಿಯು ಯಾವಾಗಲೂ ಚುನಾವಣೆಗೆ ಸಿದ್ಧವಾಗಿರುತ್ತದೆ. ಫಲಿತಾಂಶವೂ ಏನೇ ಇರಲಿ. ಬೂತ್ ಲೇವಲ್‌ನಲ್ಲಿ ನಮ್ಮ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಪರಿಸ್ಥಿತಿಯನ್ನು ನೋಡಿಕೊಂಡು ನಮ್ಮ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ.
2020ರಲ್ಲೂ ಇದೇ ರೀತಿ ಪರಿಸ್ಥಿತಿಯೂ ಉದ್ಭವವಾಗಿತ್ತು. ಅಂದು ಡಿಸಿಎಂ ಆಗಿದ್ದ ಸಚಿನ್ ಪೈಲಟ್ ನೇತೃತ್ವದಲ್ಲಿ ಒಂದಿಷ್ಟು ಶಾಸಕರು ಬಿಜೆಪಿ ಸೇರಲು ಹೊರಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದೆ ಎಂಬ ಆರೋಪವಿತ್ತು. ಆಗ ಬಿಜೆಪಿಯು ಈ ಬಂಡಾಯ ಶಾಸಕರ ಜತೆ ಸಂಪರ್ಕದಲ್ಲಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿಯಾಗಿ ಪರಿಸ್ಥಿತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.
ಇದನ್ನೂ ಓದಿ |ಪೈಲಟ್ ಆಯ್ಕೆಗೆ ವಿರೋಧ, ಗೆಹ್ಲೋಟ್ ನಿಷ್ಠಾವಂತ 80 ಶಾಸಕರ ರಾಜೀನಾಮೆ, ರಾಜಸ್ಥಾನ ಸರ್ಕಾರ ಸಂಕಷ್ಟದಲ್ಲಿ