Site icon Vistara News

ಜಿ20 ಶೃಂಗಸಭೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪ್ರಧಾನಿ ಮೋದಿ; ಹೊಗಳಿ, ಹೇಳಿಕೆ ಬಿಡುಗಡೆ ಮಾಡಿದ ಅಮೆರಿಕ ವೈಟ್​ಹೌಸ್​

White House praised PM Modi for his Message Of today era is Not of war

ನವ ದೆಹಲಿ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತುಗಳು, ಉಕ್ರೇನ್​ ಮೇಲೆ ಯದ್ಧ ಸಾರಿರುವ ರಷ್ಯಾಕ್ಕೆ ಕೊಟ್ಟ ‘ಯುದ್ಧಕ್ಕೆ ಇದು ಕಾಲವಲ್ಲ’ ಎಂಬ ಸಂದೇಶವನ್ನು ಅಮೆರಿಕದ ಶ್ವೇತಭವನ ಶುಕ್ರವಾರ ಶ್ಲಾಘಿಸಿದೆ. ಸೆಪ್ಟೆಂಬರ್​ನಲ್ಲಿ ಉಜ್ಬೇಕಿಸ್ತಾನ್​ದಲ್ಲಿ ಶಾಂಘೈ ಸಹಕಾರ ಶೃಂಗ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ಗೆ ‘ಯುದ್ಧಕ್ಕೆ ಇದು ಕಾಲವಲ್ಲ’ ಎಂಬ ಸಂದೇಶ ಕೊಟ್ಟಿದ್ದರು. ಜಿ20 ಶೃಂಗದಲ್ಲಿ ಪುಟಿನ್​ ಗೈರಾಗಿದ್ದರೂ, ಇಲ್ಲಿಯೂ ಉಕ್ರೇನ್​-ರಷ್ಯಾ ಸಮರದ ವಿಚಾರ ಚರ್ಚೆಗೆ ಬಂದಾಗ ಪ್ರಧಾನಿ ಮೋದಿ ಶಾಂತಿ ಸ್ಥಾಪನೆಯ ಮಹತ್ವವನ್ನು ಹೇಳಿದ್ದರು. ಅಂತಿಮವಾಗಿ ಯುದ್ಧಕ್ಕೆ ಇದು ಕಾಲವಲ್ಲ ಎಂಬ ಪ್ರಧಾನಿ ಮೋದಿ ಸಂದೇಶವನ್ನೂ ಈ ಸಲದ ಜಿ20 ಶೃಂಗಸಭೆಯ ನಿರ್ಣಯದಲ್ಲಿ ಸೇರಿಸಿಕೊಳ್ಳಲಾಗಿದೆ.

ಇದೀಗ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇಂಡೋನೇಷ್ಯಾದಲ್ಲಿ ನಡೆದ ಶೃಂಗಸಭೆಯಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆ ಯಶಸ್ವಿಯಾಯಿತು. ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾದ ಅಧ್ಯಕ್ಷ ಜೋಕೋ ವಿಡೋಡೋ ಅವರೊಂದಿಗೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದರಲ್ಲೂ ಯುದ್ಧಕ್ಕೆ ಇದು ಸಮಯವಲ್ಲ ಎಂಬ ನಿರ್ಣಯ ಅಂಗೀಕರಿಸುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾತ್ರ ಮಹತ್ವದ್ದು. ಅದನ್ನು ಅಮೆರಿಕ ಅನುಮೋದಿಸುತ್ತದೆ’ ಎಂದು ಹೇಳಿದ್ದಾರೆ.

ಹಾಗೇ, ಪ್ರಧಾನಿ ನರೇಂದ್ರ ಮೋದಿಯವರು ಜಿ20 ಶೃಂಗಸಭೆಯಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಸವಾಲುಗಳ ಬಗ್ಗೆ ಮಾತಾಡಿದ್ದನ್ನೂ ಶ್ವೇತಭವನ ಮೆಚ್ಚಿಕೊಂಡಿದೆ. ‘ಅಮೆರಿಕ ಕೂಡ ಈ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಪರಿಹರಿಸಲು ಕ್ರಮ ಕೈಗೊಂಡಿದೆ. ಬರುವ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದೂ ಕರೀನ್ ಜೀನ್-ಪಿಯರ್ ತಿಳಿಸಿದ್ದಾರೆ. ಅಂದಹಾಗೇ, 2023ರಲ್ಲಿ ಜಿ23 ಸಮಾವೇಶ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: G20 Summit | ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರ, ಎಲ್ಲಿ ನಡೆಯಲಿದೆ ಶೃಂಗ?

Exit mobile version