ನವದೆಹಲಿ: ಛತ್ತೀಸ್‌ಗಢ (Chhattisgarh) ಮತ್ತು ಮಧ್ಯ ಪ್ರದೇಶದಲ್ಲಿ (Madhya Pradesh) ಮುಖ್ಯಮಂತ್ರಿಗಳಾಗಿ ಹೊಸಬರನ್ನು ಆಯ್ಕೆ ಮಾಡಿದಂತೆ ರಾಜಸ್ಥಾನದಲ್ಲಿ (Rajasthan) ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭಜನ್‌ಲಾಲ್ ಶರ್ಮಾ (Bhajanlal Sharma) ಅವರನ್ನು ಬಿಜೆಪಿ ಪಾರ್ಟಿಯು, ಸಿಎಂ ಪೋಸ್ಟ್‌ಗೆ (Chief Minister) ನೇಮಕ ಮಾಡಿದೆ. ಇದೇ ವೇಳೆ, ಜನರ ರಾಜಕುಮಾರಿ ಎಂದೇ ಖ್ಯಾತರಾಗಿರುವ ದಿಯಾ ಕುಮಾರಿ (Diya Kumari) ಮತ್ತು ಪ್ರೇಮ್ ಚಂದ್ ಬೈರ್ವಾ (Prem Chand Bairwa) ಅವರನ್ನು ಉಪ ಮುಖ್ಯಮಂತ್ರಿಗಳಾಗಿ (Rajasthan DCM) ಆಯ್ಕೆ ಮಾಡಲಾಗಿದೆ.
ಯಾರು ಈ ದಿಯಾ ಕುಮಾರಿ?
ಜೈಪುರ ರಾಜ ಕುಟುಂಬದ ರಾಜಕುಮಾರಿ ದಿಯಾ ಕುಮಾರಿ ಹಾಲಿ ಸಂಸದೆಯೂ ಆಗಿದ್ದರು. ದಿಯಾ ಕುಮಾರಿ ಅವರು ಜೈಪುರದ ರಾಜವಂಶದ ಕೊನೆಯ ಆಡಳಿತದ ಮಹಾರಾಜ ಮಾನ್ ಸಿಂಗ್ II ಅವರ ಮೊಮ್ಮಗಳು. ಪ್ರಚಾರದ ವೇಳೆ ದಿಯಾ ಕುಮಾರಿಯನ್ನು ಜೈಪುರದ ಮಗಳು, ಬೀದಿಗಳಲ್ಲಿ ನಡೆಯುವ ರಾಜಕುಮಾರಿ ಎಂದೇ ಪ್ರಚಾರ ಮಾಡಲಾಯಿತು. ರಾಜಸ್ಥಾನದ ಪರಂಪರೆ ಮತ್ತು ಸರಳತೆಯ ಮಿಶ್ರಣವಾಗಿರುವ ದಿಯಾ ಕುಮಾರಿ ಅವರು ರಾಜಸ್ಥಾನದಲ್ಲಿ ಸದ್ಯ ಅತ್ಯಂತ ಜನಪ್ರಿಯ ನಾಯಕಿ.
2013ರಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದ ದಿಯಾ ಕುಮಾರಿ ಅವರು ಈವರೆಗೆ ಎರಡು ಚುನಾವಣೆಗಳನ್ನು ಗೆದ್ದಿದ್ದಾರೆ. 2013ರಲ್ಲಿ ಅವರು ಸವಾಯಿ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. 2019ರಲ್ಲಿ ರಾಜಸಮಂದ್ ಕ್ಷೇತ್ರದಿಂದ ಸ್ಪರ್ಧಿಸಿ 5.51 ಲಕ್ಷ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದರು. ಪರಿಸರ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣ ವಿಷಯಗಳ ಮೂಲಕವೇ ಹೆಚ್ಚು ಪ್ರಸಿದ್ಧಿಗೆ ಬಂದಿರುವ 52 ವರ್ಷದ ದಿಯಾ ಕುಮಾರಿ ಅವರು, 2019 ರಲ್ಲಿ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಸದಸ್ಯರಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು. 2023ರ ಚುನಾವಣೆಯಲ್ಲಿ ದಿಯಾ ಕುಮಾರಿ ಅವರು ಜೈಪುರದ ವಿದ್ಯಾನಗರದ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ಯಾರು ಪ್ರೇಮ್ ಚಂದ್ ಬೈರ್ವಾ?
54 ವರ್ಷದ ಪ್ರೇಮ್ ಚಂದ್ ಬೈರ್ವಾ ಅವರು ದುದು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಾಬುಲಾಲ್ ನಗರ್ ಅವನರ್ನು 35 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. 2018ರ ಚುನಾವಣೆಯಲ್ಲಿ ಬೈರ್ವಾ ಅವರು ಸೋಲು ಕಂಡಿದ್ದರು. ಆಗ ಬಾಬು ಲಾಲ್ ನಗರ್ ಅವರು 14,779 ಮತಗಳ ಅಂತರದಿಂದ ಗೆದ್ದಿದ್ದರು. ಬೈರ್ವಾ ಅವರು 2013 ರಲ್ಲಿ ದುದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಜಾರಿ ಲಾಲ್ ನಗರ್ ಅವರನ್ನು 33,720 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದರು. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿರುವ ಬೈರ್ವಾ ಅವರನ್ನು ಡಿಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಮುಕ್ತಾಯವಾದ ವಿಧಾನಸಭೆ ಚುನಾವಣೆಯಲ್ಲಿ, ರಾಜಸ್ಥಾನದ 199 ಸೀಟುಗಳ ಪೈಕಿ ಭಾರತೀಯ ಜನತಾ ಪಾರ್ಟಿಯು 115 ಗೆದ್ದು, ಭರ್ಜರಿ ಜಯ ಸಾಧಿಸಿತು. ಆಢಳಿತಾರೂಢ ಕಾಂಗ್ರೆಸ್ ಪಕ್ಷವು ಕೇವಲ 65 ಸೀಟುಗಳನ್ನು ಮಾತ್ರ ಗೆಲ್ಲಲು ಶಕ್ಯವಾಯಿತು. ಇದರೊಂದಿಗೆ ಅಧಿಕಾರವನ್ನು ಕಳೆದುಕೊಂಡಿತು. ಭಜನ್ ಲಾಲ್ ಶರ್ಮಾ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮುನ್ನು, ಆ ಹುದ್ದೆಗೆ ಮಾಜಿ ಸಿಎಂ ವಸುಂಧರಾ ರಾಜೇ, ಅನಿತಾ ಭದೇಲ್, ಸಿದ್ಧಿ ಕುಮಾರಿ, ಬಾಬಾ ಬಾಲಕನಾಥ್, ಗಜೇಂದ್ರ ಶೆಖಾವತ್, ಅಶ್ವಿನ್ ವೈಷ್ಣವ್ ಅವರ ಹೆಸರು ಕೇಳಿ ಬರುತ್ತಿತ್ತು.
ಈ ಸುದ್ದಿಯನ್ನೂ ಓದಿ: Bhajanlal Sharma: ಯಾರಿವರು ರಾಜಸ್ಥಾನದ ನೂತನ ಸಿಎಂ ಭಜನ್‌ಲಾಲ್ ಶರ್ಮಾ?