Site icon Vistara News

Bhajanlal Sharma: ಯಾರಿವರು ರಾಜಸ್ಥಾನದ ನೂತನ ಸಿಎಂ ಭಜನ್‌ಲಾಲ್ ಶರ್ಮಾ?

Who is Bhajanlal Sharma? he will be new cm of rajasthan

ಜೈಪುರ: ಎಲ್ಲರ ಅಂದಾಜು, ಊಹೆಗಳನ್ನು ಸುಳ್ಳು ಮಾಡಿರುವ ಬಿಜೆಪಿಯ ಹೈಕಮಾಂಡ್ (BJP High command) ರಾಜಸ್ಥಾನದ ಮುಖ್ಯಮಂತ್ರಿ (Chief Minister of Rajasthan) ಸ್ಥಾನಕ್ಕೆ ಅಚ್ಚರಿಯ ಹೊಸ ಮುಖ, ಭಜನ್‌ಲಾಲ್ ಶರ್ಮಾ (Bhajanlal Sharma) ಅವರನ್ನು ಆಯ್ಕೆ ಮಾಡಿದೆ. ಮೊದಲ ಬಾರಿ ಶಾಸಕರಾಗಿರುವ ಭಜನ್‌ಲಾಲ್ ಅವರಿಗೂ ತಾವು ಮುಖ್ಯಮಂತ್ರಿಯಾಗುವ ಬಗ್ಗೆ ಕಿಂಚಿತ್ ಅನುಮಾನವೂ ಇರಲಿಲ್ಲ ಏನೋ! ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶದಂತೆ ಬಿಜೆಪಿ ಇಲ್ಲಿಯೂ ತನ್ನದೇ ದಾಳವನ್ನು ಉರುಳಿಸಿದೆ. ರಾಜಸ್ಥಾನದಲ್ಲಿರುವ ಶೇ.7ರಷ್ಟಿರುವ ಬ್ರಾಹ್ಮಣರ ಸಮುದಾಯದ (Brahman Community) ವ್ಯಕ್ತಿಗೆ ಪಟ್ಟ ಕಟ್ಟುವ ಮೂಲಕ ಸೂಕ್ಷ್ಮ ಸಂದೇಶಗಳನ್ನು ರವಾನಿಸಿದೆ. 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಈ ನಡೆ ಎಷ್ಟು ಲಾಭ ತಂದುಕೊಡಲಿದೆ ಎಂದು ಕಾದು ನೋಡಬೇಕು.

ರಾಜಸ್ಥಾನದಲ್ಲಿ ಬಿಜೆಪಿಯ ಕಾರ್ಯದರ್ಶಿಯಾಗಿದ್ದ 56 ವರ್ಷದ ಭಜನ್‌ಲಾಲ್, ರಾಜಸ್ಥಾನದಲ್ಲೇ ಪೂರ್ಣ ಪ್ರಮಾಣದಲ್ಲಿ ಜನರಿಗೆ ಗೊತ್ತಿಲ್ಲ. ಇನ್ನೂ ರಾಜಸ್ಥಾನದ ಹೊರಗೆ ಹೇಗೆ ಗೊತ್ತಿರಲು ಸಾಧ್ಯ. ಹಾಗಾಗಿ, ಯಾರು ಈ ಭಜನ್‌ಲಾಲ್ ಶರ್ಮಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಮುಖ್ಯಮಂತ್ರಿ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಿದಂತೆ ಎರಡು ಡಿಸಿಎಂಗಳಿಗೂ ದಿಯಾ ಕುಮಾರಿ ಹಾಗೂ ಪ್ರೇಮ್​ಚಂದ್ ಭೈರವ ಎಂಬ ಹೊಸಬರನ್ನು ಆಯ್ಕೆ ಮಾಡಲಾಗಿದೆ.

ರಾಜಸ್ಥಾನದ ಸಂಗನೇರ್ ವಿಧಾನಸಭೆ ಕ್ಷೇತ್ರದಿಂದ ಭಜನಲ್ ಲಾಲ್ ಶರ್ಮಾ ಅವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜಸ್ಥಾನದ ಬಿಜೆಪಿಗೆ ನಾಲ್ಕು ಬಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಭಜನ್ ಲಾಲ್ ಅವರು, ಕಾಂಗ್ರೆಸ್‌ನ ಪುಷ್ಪೇಂದ್ರ ಭಾರದ್ವಾಜ್ ಅವರನ್ನು 48,081 ಮತಗಳ ಅಂತರಿಂದ ಸೋಲಿಸಿದ್ದಾರೆ. ಈಗ ಅನಾಯಸವಾಗಿ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.

ಭಜನ್ ಲಾಲ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಸ್ನಾತಕ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರು ಒಟ್ಟು 1.5 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಈ ಪೈಕಿ, 43.6 ಲಕ್ಷ ಚರಾಸ್ತಿ ಮತ್ತು 1 ಕೋಟಿ ರೂ. ಸ್ಥಿರಾಸ್ತಿ ಇದೆ. ಒಟ್ಟು ಅವರು 11.1 ಲಕ್ಷ ರೂ. ಆದಾಯವನ್ನು ಘೋಷಣೆ ಮಾಡಿದ್ದು, ಈ ಪೈಕಿ 6.9 ಲಕ್ಷ ರೂ. ಸ್ವಂತ ಆದಾಯವಾಗಿದೆ.

ಭಜನ್‌ಲಾಲ್ ಶರ್ಮಾ ಅವರು ಮೂಲತ ಭಾರತಪುರದವರು. ಆದರೆ, ಪಾರ್ಟಿಯು ಅವರಿಗೆ ಆ ಕ್ಷೇತ್ರದಲ್ಲಿ ಟಿಕೆಟ್ ನೀಡಿರಲಿಲ್ಲ. ಬದಲಿಗೆ ಅವರಿಗೆ ಸಂಗನೇರ್ ಕ್ಷೇತ್ರದಿಂದ ಟಿಕೆಟ್ ನೀಡಿತ್ತು ಮತ್ತು ಗೆದ್ದು ಬಂದರು.

ಭಜನ್‌ಲಾಲ್ ಅವರು ಸಂಪೂರ್ಣವ ಸಂಘದ ಮನುಷ್ಯ. ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿದ ನಂತರ ಬಿಜೆಪಿ ತೆಗೆದುಕೊಂಡ ರಾಜ್ಯದಲ್ಲಿ ಬಿಜೆಪಿಯ ದೀರ್ಘಾವಧಿಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಅವರು ಕೂಡ ಒಬ್ಬರು. ಭಜನ್ ಲಾಲ್ ಅವರು ರಾಜಕೀಯ ಪ್ರವೇಶಿಸುವ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಇದ್ದರು. ರಾಜಸ್ಥಾನದಲ್ಲಿ ನಡೆಯುವ ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಅವರಿರುತ್ತಾರೆ. ಮೇಲ್ಜಾತಿ ನಾಯಕನಾಗಿದ್ದರೂ ಲೋ ಪ್ರೊಫೈಲ್‌ ಮೆಂಟೇನ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Bhajan Lal Sharma : ಮೊದಲ ಬಾರಿ ಶಾಸಕರಾದ ಭಜನ್​ಲಾಲ್​ ಶರ್ಮಾ ರಾಜಸ್ಥಾನದ ಸಿಎಂ

Exit mobile version