Site icon Vistara News

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Venkataramana Reddy

Who is BJP's Venkata Ramana Reddy? The man who has defeated KCR, Revanth Reddy In Kamareddy

ಹೈದರಾಬಾದ್:‌ ಚುನಾವಣೆಗಳು ಎಂದರೇನೇ ಹಾಗೆ. ಬಲಿಷ್ಠ ನಾಯಕರು ಎನಿಸಿಕೊಂಡವರು, ಅಹಂಕಾರದಿಂದ ಮೆರೆದವರು, ಸೋಲೇ ಕಾಣದವರು ಕೂಡ ಸೋಲನುಭವಿಸುತ್ತಾರೆ. ಹಾಗೆಯೇ, ಹೆಚ್ಚು ಸುದ್ದಿಯಾಗದವರು, ಸಾಮಾನ್ಯ ಹಿನ್ನೆಲೆ ಹೊಂದಿದವರು ಕೂಡ ಭರ್ಜರಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸುತ್ತಾರೆ. ತೆಲಂಗಾಣದಲ್ಲಿ ಹೀಗೆ ಬಲಿಷ್ಠರನ್ನು ಸೋಲಿಸುವ ಮೂಲಕ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಅಚ್ಚರಿ ಮೂಡಿಸಿದ್ದಾರೆ. ಇವರು ಹಾಲಿ ಮುಖ್ಯಮಂತ್ರಿ, ಬಿಆರ್‌ಎಸ್‌ನ ಕೆ. ಚಂದ್ರಶೇಖರ್‌ ರಾವ್‌ ಹಾಗೂ ಭಾವಿ ಸಿಎಂ ಎಂದೇ ಹೇಳಲಾಗುತ್ತಿರುವ ಕಾಂಗ್ರೆಸ್‌ನ ರೇವಂತ್‌ ರೆಡ್ಡಿ ಅವರನ್ನು ಸೋಲಿಸುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಕೆ. ವೆಂಕಟರಮಣ ರೆಡ್ಡಿ ಅವರು ಕಾಮರೆಡ್ಡಿ ವಿಧಾಣಸಭೆ ಕ್ಷೇತ್ರದಲ್ಲಿ ಕೆಸಿಆರ್‌ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರನ್ನು ಸೋಲಿಸಿದ್ದಾರೆ. ಇವರು ಕೆಸಿಆರ್‌ ಅವರಿಗಿಂತ 6,741 ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ, ಘಟಾನುಘಟಿಗಳನ್ನೇ ಸೋಲಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇದರಿಂದಾಗಿ ಅವರು ರಾಜ್ಯದಲ್ಲಿ ಬಿಜೆಪಿ ಪ್ರಮುಖ ನಾಯಕರಾಗಿಯೂ ಹೊರಹೊಮ್ಮಿದ್ದಾರೆ.

ಯಾರಿವರು ವೆಂಕಟರಮಣ ರೆಡ್ಡಿ?

ಕೆವಿಆರ್‌ ಎಂದೇ ಖ್ಯಾತಿಯಾಗಿರುವ ಕಾಟಿಪಳ್ಳಿ ವೆಂಕಟರಮಣ ರೆಡ್ಡಿ ಅವರು ಕಾಮರೆಡ್ಡಿ ವಿಧಾನಸಭೆ ಕ್ಷೇತ್ರದ ನಾಯಕರಾಗಿದ್ದಾರೆ. ಕೆ. ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಬಿಆರ್‌ಎಸ್)‌ ಪಕ್ಷದಲ್ಲಿದ್ದ ಇವರು ಬಳಿಕ ಬಿಜೆಪಿ ಸೇರಿದ್ದರು. ಉದ್ಯಮಿಯಾಗಿದ್ದ ಇವರು ರಾಜಕೀಯ ಪ್ರವೇಶಿಸಿ, ಟಿಆರ್‌ಎಸ್‌ ಬಿಟ್ಟು, ಬಿಜೆಪಿ ಸೇರಿ ಈಗ ಇತಿಹಾಸ ಸೃಷ್ಟಿಸಿದ್ದಾರೆ.

ಇವರ ಗೆಲುವಿಗೆ ಕಾರಣವೇನು?

ಕೆ. ವೆಂಕಟರಮಣ ರೆಡ್ಡಿ ಅವರು ಕಾಮರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಲು ಹಲವು ಕಾರಣಗಳಿವೆ. ಕೆ. ಚಂದ್ರಶೇಖರ್‌ ರಾವ್‌ ಹಾಗೂ ರೇವಂತ್‌ ರೆಡ್ಡಿ ಅವರು ಸ್ಥಳೀಯರಲ್ಲ. ಆದರೆ, 53 ವರ್ಷದ ಕೆ. ವೆಂಕಟರಮಣ ರೆಡ್ಡಿ ಅವರು ಸ್ಥಳೀಯ ನಾಯಕರಾಗಿದ್ದಾರೆ. ಅಲ್ಲದೆ, ಬಿರುಸಿನ ಪ್ರಚಾರ, ಕೆಸಿಆರ್‌ ಹಾಗೂ ರೇವಂತ್‌ ರೆಡ್ಡಿ ಅವರು ಹೊರಗಿನವರು, ಅವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜನರಿಗೆ ಮನವರಿಕೆ ಮಾಡಿದ್ದರಿಂದ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ ಕಾಂಗ್ರೆಸ್

“ನಾನು ಇಲ್ಲಿಯೇ ಹುಟ್ಟಿದ್ದೇನೆ ಹಾಗೂ ಸಾಯುವತನಕ ಇಲ್ಲಿಯೇ ಇರುತ್ತೇನೆ. ಹೊರಗಿನವರಿಗೆ ಮತ ಹಾಕುವುದು ಎಂದರೆ, ನಾವೇ ಮುಳುಗಿದಂತೆ” ಎಂದು ಚುನಾವಣೆ ಪ್ರಚಾರದ ವೇಳೆ ಕೆ. ವೆಂಕಟರಮಣ ರೆಡ್ಡಿ ಅಬ್ಬರದ ಭಾಷಣ ಮಾಡುತ್ತಿದ್ದರು. ಯುವಕರನ್ನು ಸೆಳೆದು, ಕಾರ್ಯಕರ್ತರನ್ನು ಹಿಡಿದಿಟ್ಟುಕೊಂಡು ಗೆಲುವು ಸಾಧಿಸಿದ ಇವರೀಗ ಸೆಲೆಬ್ರಿಟಿ ರಾಜಕಾರಣಿಯಾಗಿಯೂ ಬದಲಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು, ಯಾರು ಯಾರನ್ನು ಬೇಕಾದರೂ ಸೋಲಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್‌ 64 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ರೇವಂತ್‌ ರೆಡ್ಡಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬಿಆರ್‌ಎಸ್‌ 39 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 8 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version